
- ಸ್ಮಾರ್ಟ್ ಎಲ್ ಇ ಡಿ ದೀಪದಿಂದ ಶೇ 85.50 ರಷ್ಟು ವಿದ್ಯುತ್ ಉಳಿತಾಯ
- 18 ಸಾವಿರ ಎಲ್ಇಡಿ ದೀಪಗಳು ಸ್ಮಾರ್ಟ್ ದೀಪಗಳಾಗಿ ಬದಲಾವಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಮಾರ್ಟ್ ಎಲ್.ಇ.ಡಿ ಬೀದಿ ದೀಪಗಳ ನಿಯಂತ್ರಣಕ್ಕೆ ನೂತನ ಕೊಠಡಿಯನ್ನು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ನ.13 ರಂದು ತೆರೆದಿದೆ.
ನಿಯಂತ್ರಣ ಕೊಠಡಿ ಉದ್ಘಾಟನೆ ನಡೆಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಮಾರ್ಟ್ ಎಲ್ ಇಡಿ ಬೀದಿ ದೀಪಗಳನ್ನು ಅಳವಡಿಸುವಂತೆ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಳೆಯ ಸೋಡಿಯಂ ಬೀದಿ ದೀಪಗಳನ್ನು ಎಲ್ ಇಡಿ ಸ್ಮಾರ್ಟ್ ಬೀದಿ ದೀಪಗಳನ್ನಾಗಿ ಬದಲಾಯಿಸಿ ಹಾಗೂ ಅವುಗಳನ್ನು ಒಂದೇ ಕೊಠಡಿಯಲ್ಲಿ ಕುಳಿತು ನಿಯಂತ್ರಿಸುವಂತೆ ಯೋಜನೆ ರೂಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕ್ಯಾಂಟರ್ ಡಿಕ್ಕಿ ಹೊಡೆದು ಯುವಕ ಸಾವು; ಚಾಲಕನನ್ನು ಬಂಧಿಸಿದ ಪೊಲೀಸರು
ಸ್ಮಾರ್ಟ್ ಎಲ್ ಇಡಿ ಬೀದಿ ದೀಪ ಯೋಜನೆಯಡಿ ಕ್ಷೇತ್ರದಾದ್ಯಂತ ಇರುವ 18 ಸಾವಿರ ಎಲ್ ಇಡಿ ದೀಪಗಳನ್ನು, ಸ್ಮಾರ್ಟ್ ದೀಪಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಇದನ್ನು ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಕೊಠಡಿ (ಸಿಸಿಎಂಎಸ್) ಅಲ್ಲಿರುವವರು ನಿಯಂತ್ರಿಸುತ್ತಾರೆ ಎಂದು ಪಾಲಿಕೆ ತಿಳಿಸಿದೆ.
ವಿದ್ಯುತ್ ಬಳಕೆಯಲ್ಲಿ ಶೇ 85.50ರಷ್ಟು ಉಳಿತಾಯವಾಗುವುದರ ಜೊತೆಗೆ ಹೆಚ್ಚಿನ ಸುರಕ್ಷತೆಗೂ ಇದು ನೆರವಾಗಲಿದೆ ಎಂದು ಬಿಬಿಎಂಪಿ ತಿಳಿಸಿದೆ. ವಿದ್ಯುತ್ ವೆಚ್ಚದ ವಾರ್ಷಿಕ ವೆಚ್ಚವು ನಾಲ್ಕೂ ಕೋಟಿ ರೂಪಾಯಿಗಿಂತ ಕಡಿಮೆಯಾಗುತ್ತದೆ. ಪ್ರಸ್ತುತ ಕ್ಷೇತ್ರದಾದ್ಯಂತ ವಾರ್ಷಿಕ ವಿದ್ಯುತ್ ವೆಚ್ಚವು ₹10 ಕೋಟಿಯಾಗಿದೆ. ವಿದ್ಯುತ್ ವೆಚ್ಚದ ಜೊತೆಗೆ ಆರು ವಾರ್ಡ್ಗಳ ನಿರ್ವಹಣೆಯ ವೆಚ್ಚ ಹೆಚ್ಚುವರಿಯಾಗಿದೆ. ಹೀಗಾಗಿ ಇನ್ನು ಮುಂದೆ ಇಂತಹ ವೆಚ್ಚಗಳನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಬಿಬಿಎಂಪಿ ತಿಳಿಸಿದೆ.
ಉದ್ಘಾಟನೆ ಸಮಾರಂಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ಡಾ. ಎಲ್.ಆರ್.ದೀಪಕ್ ಹಾಗೂ ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.