ಬೀದಿಬದಿ ಆಹಾರ ವ್ಯಾಪಾರಿಗಳಿಗೆ ತರಬೇತಿ ನೀಡಲು ಮುಂದಾದ ಬಿಬಿಎಂಪಿ

  • ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆ ಕಾಯ್ದುಕೊಳ್ಳಲು ತರಬೇತಿ
  • ಸ್ವಿಗ್ಗಿ, ಝೊಮ್ಯಾಟೊ ಜತೆಗೆ ಜೋಡಣೆ ಮಾಡಿಕೊಳ್ಳಲು ಸಹಕಾರಿ

ಬೆಂಗಳೂರು ನಗರದ ಬೀದಿಬದಿಗಳಲ್ಲಿ ಆಹಾರ ಮಾರಾಟ ಮಾಡುವ ವ್ಯಾಪಾರಿಗಳು ಆಹಾರದ ಗುಣಮಟ್ಟ ಮತ್ತು ಸುರಕ್ಷತೆ ಕಾಯ್ದುಕೊಳ್ಳುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪಾರಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ಆರಂಭಿಸಿದೆ.

ಬೀದಿಬದಿ ಆಹಾರ ವ್ಯಾಪಾರ ಎಂದರೆ ಸಾಮಾನ್ಯವಾಗಿ ಗಮನಿಸುವ ಸಂಗತಿ ಅಶುಚಿತ್ವ. ಬಹುತೇಕ ವ್ಯಾಪಾರಿಗಳು ನೀರಿನ ಅಭಾವದಿಂದ ಅಥವಾ ಹೆಚ್ಚಿನ ಸಂಖ್ಯೆಗಳಲ್ಲಿ ಗ್ರಾಹಕರು ಬಂದಾಗ ಸರಿಯಾಗಿ ಪಾತ್ರೆಗಳನ್ನು ತೊಳೆಯುವುದಿಲ್ಲ. ಜತೆಗೆ ಕಡಿಮೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಆಹಾರಗಳನ್ನು ತಯಾರಿಸುತ್ತಾರೆ. ಈ ಆಹಾರ ಸೇವಿಸುವುದರಿಂದ ಗ್ರಾಹಕರಿಗೆ ನಾನಾ ರೋಗಗಳು ಬರುವ ಸಾಧ್ಯತೆ ಹೆಚ್ಚು. ಗ್ರಾಹಕರ ಆರೋಗ್ಯ ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಬಿಬಿಎಂಪಿ ಬೀದಿಬದಿ ಆಹಾರ ವ್ಯಾಪಾರಿಗಳಿಗೆ ತರಬೇತಿ ನೀಡಲು ಮುಂದಾಗಿದೆ.

ಬಿಬಿಎಂಪಿ ಉಪ ಆಯುಕ್ತ (ಕಲ್ಯಾಣ) ಕೆ ಮುರಳೀಧರ್, ಈ ದಿನ. ಕಾಮ್ ಜತೆಗೆ ಮಾತನಾಡಿ, “ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೇ ತರಬೇತಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಎಂಟು ವಲಯಗಳಿಗೂ ವಿಸ್ತರಿಸಲಾಗುವುದು. ವ್ಯಾಪಾರಿಗಳು ತರಬೇತಿ ಪಡೆದರೆ, ಗ್ರಾಹಕರಿಗೆ ಶುಚಿತ್ವವಾದ ಆಹಾರ ಕೊಡಬಹುದು. ಜತೆಗೆ ವಹಿವಾಟು ಕೂಡ ಚೆನ್ನಾಗಿ ನಡೆಸಲು ಅನುಕೂಲವಾಗಲಿದೆ” ಎಂದು ತಿಳಿಸಿದರು.

“ಗುಣಮಟ್ಟದ ಆಹಾರ ಮತ್ತು ಸ್ವಚ್ಛತೆಯಿಂದ ಮುಂದಿನ ದಿನಗಳಲ್ಲಿ ಸ್ವಿಗ್ಗಿ ಮತ್ತು ಝೊಮ್ಯಾಟೊಗಳೊಂದಿಗೆ ಜೋಡಣೆ ಮಾಡಿಕೊಳ್ಳಲು ಹೆಚ್ಚು ಸಹಕಾರಿ ಆಗಲಿದೆ. ಇದರಿಂದ ವ್ಯಾಪಾರಿಗಳು ಆರ್ಥಿಕವಾಗಿ ಹೆಚ್ಚು ಸಬಲರಾಗಬಹುದು” ಎಂದರು. 

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ| ಬೀದಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ 'ನಿರಪೇಕ್ಷಣಾ ಪತ್ರ' ಕಡ್ಡಾಯ

“ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಸಿಬ್ಬಂದಿಯು ವ್ಯಾಪಾರಿಗಳಿಗೆ ಎರಡು ದಿನ ತರಬೇತಿ ನೀಡಲಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ನೀತಿಯೂ ಹೌದು” ಎಂದರು ಹೇಳಿದರು. 

“2018-19ರಲ್ಲಿ ಸರ್ವೆ ಮಾಡಿದಾಗ 19 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಪ್ರಸ್ತುತ ಎಂಟು ವಲಯಗಳಲ್ಲಿ ಅಂದಾಜು 1.5 ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳು ಇದ್ದಾರೆ” ಎಂದು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್