ಬಿಬಿಎಂಪಿ ಮೀಸಲಾತಿ | ಬಿಜೆಪಿ ಕೈಗೊಂಬೆಯಾದ ಚುನಾವಣಾ ಆಯೋಗ, ನಗರಾಭಿವೃದ್ಧಿ ಇಲಾಖೆ: ಕಾಂಗ್ರೆಸ್ ಆರೋಪ

bbmp
  • ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1.70ಲಕ್ಷ ಜನ ಪರಿಶಿಷ್ಟರಿದ್ದಾರೆ
  • ವಾರ್ಡ್‌ ಮೀಸಲಾತಿ ಹಿಂದೆ ಚುನಾವಣೆ ಮುಂದೂಡುವ ಕುತಂತ್ರ ಇದೆ 

ಕರ್ನಾಟಕ ಮುನ್ಸಿಪಲ್ ಕಾಯ್ದೆಯ (ಕೆಎಂಸಿ) ಪ್ರಕಾರ, ಮೀಸಲಾತಿ ಪ್ರಕಟಿಸದೆ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ ಮತ್ತು ನಗರಾಭಿವೃದ್ಧಿ ಇಲಾಖೆಗಳು ಬಿಜೆಪಿ ಕೈಗೊಂಬೆಯಾಗಿವೆ. ಆ ಮೂಲಕ ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡುತ್ತಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಸ್‌ಸಿ ಘಟಕದ ಉಪಾಧ್ಯಕ್ಷ ನಲ್ಲೂರಹಳ್ಳಿ ನಾಗೇಶ್ ಆರೋಪಿಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 243 ವಾರ್ಡ್ ಮೀಸಲಾತಿ ಕುರಿತಂತೆ, ದಿನದಿಂದ ದಿನಕ್ಕೆ ಪ್ರತಿಭಟನೆಯ ಕಾವು ಭುಗಿಲೇಳುತ್ತಿದೆ. ಈಗಾಗಲೇ ಪ್ರಕಟವಾಗಿರುವ ಮೀಸಲಾತಿ ಪಟ್ಟಿಯನ್ನು ಖಂಡಿಸಿ, ನಗರದ ವರ್ತೂರು ಕೋಡಿ ಬಳಿ ಕಾಂಗ್ರೆಸ್ ಪಕ್ಷದ ನಾಯಕರು ಭಾನುವಾರ (ಆ.7) ರಂದು ಪ್ರತಿಭಟನೆ ನಡೆಸಿದರು.

“ಮಹದೇವಪುರ ವಿಧಾನಸಭಾ ಕ್ಷೇತ್ರವು ದಲಿತ ಮೀಸಲಾತಿ ಕ್ಷೇತ್ರವಾಗಿದ್ದು, ಕ್ಷೇತ್ರದಲ್ಲಿ ಸುಮಾರು 1.70 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದವರಿದ್ದಾರೆ. ಮಹದೇವಪುರ ಶಾಸಕರಿಂದ ಹದಿಮೂರು ವಾರ್ಡ್‌ಗಳಲ್ಲಿ ಒಂದನ್ನು ಮಾತ್ರ ಪರಿಶಿಷ್ಟ ಜನಾಂಗಕ್ಕೆ ಮೀಸಲಿಟ್ಟು ದಲಿತ ಜನಾಂಗಕ್ಕೆ ವಂಚಿಸುತ್ತಿದ್ದಾರೆ” ನಾಗೇಶ್ ದೂರಿದರು.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಮೀಸಲಾತಿ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್‌ 10 ಕೊನೆಯ ದಿನ

“ಬಿಜೆಪಿಯವರ ದುರಾಲೋಚನೆಯಿಂದಾಗಿ ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ, ಮನಸ್ಸಿಗೆ ಬಂದಂತೆ ವಾರ್ಡ್ ವಿಂಗಡನೆ ಮತ್ತು ಮೀಸಲಾತಿ ನಿಗದಿ ಮಾಡಿದ್ದಾರೆ. ಇದು ಚುನಾವಣೆ ಮುಂದೂಡುವ ತಂತ್ರವಾಗಿದೆ” ಎಂದು ಮಾಜಿ ಪಾಲಿಕೆ ಸದಸ್ಯ ಉದಯ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳತೂರು ರಮೇಶ್, ವರ್ತೂರು ಎಸ್‌ಸಿ-ಎಸ್‌ಟಿ ಬ್ಲಾಕ್ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಜಯರಾಂ ರೆಡ್ಡಿ, ಮುಖಂಡರಾದ ಏ ಟಿ ಬಿ ಬಾಬು, ನಾಗಪ್ಪ, ಅನಿಲ್ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್