ಕೆಐಎ | ಓಲಾ ಉಬರ್ ದುಬಾರಿ ಹಿನ್ನಲೆ; 'ವಾಯು ವಜ್ರ' ಪ್ರಯಾಣಿಕರಲ್ಲಿ ಶೇ 140ರಷ್ಟು ಹೆಚ್ಚಳ

  • ಕೆಂಪೇಗೌಡ ವಿಮಾನ ನಿಲ್ದಾಣದವರೆಗೂ ₹1,300 ಪ್ರಯಾಣ ದರ ವಿಧಿಸುವ ಕ್ಯಾಬ್‌ಗಳು
  • ಜನವರಿಯಲ್ಲಿ 2.9 ಕೋಟಿ ಇದ್ದ 'ವಾಯು ವಜ್ರ' ಆದಾಯ ಅಕ್ಟೋಬರ್‌ಗೆ ₹ 8 ಕೋಟಿಗೆ ಏರಿದೆ

ಆ್ಯಪ್ ಆಧಾರಿತ ಆಟೋ, ಕ್ಯಾಬ್‌ ದರ ದುಬಾರಿಯಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಹೆಚ್ಚು ಮಂದಿ 'ವಾಯು ವಜ್ರ' ಬಸ್‌ಗಳನ್ನು ಬಳಸತೊಡಗಿದ್ದಾರೆ. 'ವಾಯು ವಜ್ರ' ಪ್ರಯಾಣಿಕರ ಸಂಖ್ಯೆ ಶೇ. 140ರಷ್ಟು ಹೆಚ್ಚಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತಿಳಿಸಿದೆ. 

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಆ್ಯಪ್ ಆಧಾರಿತ ಕ್ಯಾಬ್‌ಗಳು ₹800 ರಿಂದ ₹1,500 ರವರೆಗೂ ದರ ವಿಧಿಸುತ್ತಿವೆ. ಆಟೋಗಳು ದರ ₹500 ರಿಂದ ₹700 ಆಗಿದೆ. ಹೀಗಾಗಿ ₹230 ರಿಂದ ₹ 250 ದರ ವಿಧಿಸುವ ವಾಯು ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಿದ್ದಾರೆ. 

ಕಳೆದ ಕೆಲ ತಿಂಗಳ ಹಿಂದೆ ನಗರದಲ್ಲಿ ವಾಯು ವಜ್ರ ಬಸ್‌ಗಳ ಸಂಖ್ಯೆಯಲ್ಲಿ ಇಳಿಕೆ ಕಂಡಿತ್ತು. ದುಬಾರಿ ಟಿಕೆಟ್‌ ಎಂದು ಹಲವರು ಈ ಬಸ್‌ಗಳಲ್ಲಿ ಸಂಚರಿಸುವುದನ್ನು ಕಡಿಮೆ ಮಾಡಿದ್ದರು. ಐಟಿ ಉದ್ಯೋಗಿಗಳು ಕೋವಿಡ್ ನಂತರ 'ವರ್ಕ್‌ ಫ್ರಂ ಹೋಮ್‌'ನ ಮೊರೆ ಹೋಗಿದ್ದರಿಂದ 'ವಾಯು ವಜ್ರ' ಬಸ್‌ ಪ್ರಯಾಣಿಕರ ಸಂಚಾರ ಮತ್ತಷ್ಟು ಇಳಿಮುಖವಾಗಿತ್ತು.

ಇದೀಗ ಓಲಾ ಉಬರ್ ಮತ್ತಿತ್ತರ ಟ್ಯಾಕ್ಸಿಗಳು ದುಬಾರಿ ದರ ವಸೂಲಿ ಮಾಡುತ್ತಿರುವ ಕಾರಣ ವಿಮಾನ ಪ್ರಯಾಣಿಕರು ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲು ಮತ್ತು ಅಲ್ಲಿಂದ ತಮ್ಮ ಮನೆಗಳಿಗೆ ತಲುಪಲು ಹೆಚ್ಚಾಗಿ ವಾಯು ವಜ್ರ ಬಳಸುತ್ತಿದ್ದಾರೆ. ಇದರಿಂದಾಗಿ ಬಿಎಂಟಿಸಿ ಶೇ.140 ರಷ್ಟು ಪ್ರಯಾಣಿಕರನ್ನು ಹೆಚ್ಚಿಸಿಕೊಂಡಿದೆ.

ಬಿಎಂಟಿಸಿ ಅಂಕಿ ಅಂಶದ ಪ್ರಕಾರ ಮಾಸಿಕ ವಾಯು ವಜ್ರ ಸವಾರರ ಸಂಖ್ಯೆ ಜನವರಿಯಲ್ಲಿ 1.2 ಲಕ್ಷ ಇತ್ತು. ಅಕ್ಟೋಬರ್‌ನಲ್ಲಿ 2.9 ಲಕ್ಷಕ್ಕೆ ಏರಿದೆ. ವಾಯು ವಜ್ರ ಬಸ್‌ನ ಆದಾಯವು ಜನವರಿಯಲ್ಲಿ ₹ 2.9 ಕೋಟಿ ಇತ್ತು. ಅಕ್ಟೋಬರ್‌ನಲ್ಲಿ ಅದು ₹ 8 ಕೋಟಿಗೆ ಏರಿಕೆಯಾಗಿದೆ ಎಂದು ಬಿಎಂಟಿಸಿ ಸಂತಸ ವ್ಯಕ್ತಪಡಿಸಿದೆ 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕೆ ಆರ್‌ ಮಾರುಕಟ್ಟೆ ಫ್ಲೈ ಓವರ್‌ನಲ್ಲಿ ನಟ್‌ ಬೋಲ್ಟ್‌ ಸಡಿಲ; ವಾಹನ ಸಂಚಾರ ವ್ಯತ್ಯಯ

ಬಸ್ ಟಿಕೆಟ್‌ಗಾಗಿ ಕಾಯದೆ 'ವಾಯು ವಜ್ರ' ಪಾಸ್ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ವಿಮಾನ ನಿಲ್ದಾಣದಿಂದ ನಗರಕ್ಕೆ 'ವಾಯು ವಜ್ರ' ಸವಾರರು ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ. 

'ವಾಯು ವಜ್ರ' ಬಸ್ ಮಾರ್ಗ

BMTCಯ 17 ಮಾರ್ಗಗಳಲ್ಲಿ 110 ವಾಯು ವಜ್ರ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಕೆಐಎ-8 (ಎಲೆಕ್ಟ್ರಾನಿಕ್ಸ್ ಸಿಟಿ-ಕೆಐಎ), ಕೆಐಎ-9 (ಕೆಂಪೇಗೌಡ ಬಸ್ ನಿಲ್ದಾಣ-ಕೆಐಎ), ಕೆಐಎ-5 (ಬನಶಂಕರಿ-ಕೆಐಎ, ಕೆಐಎ-10 (ಮೈಸೂರು ರಸ್ತೆ ಬಸ್ ನಿಲ್ದಾಣ-ಕೆಐಎ) ನಂತಹ ಮಾರ್ಗಗಳಲ್ಲಿ ಅಧಿಕ ಮಂದಿ ವಿಮಾನ ನಿಲ್ದಾಣಕ್ಕೆ ತಲುಪಲು ವಾಯು ವಜ್ರ ಬಸ್‌ ಅವಲಂಬಿಸಿದ್ದಾರೆ.

'ವಾಯು ವಜ್ರ' ಬಸ್‌ಗಳು ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 4 ಗಂಟೆ ಅವಧಿಯಲ್ಲಿ ಸ್ವಲ್ಪ ಕಡಿಮೆ ಇರುತ್ತವೆ. ಉಳಿದಂತೆ ದಿನಪೂರ್ತಿ ಎಲ್ಲ ಮಾರ್ಗಗಳಲ್ಲೂ ಅಗತ್ಯಕ್ಕೆ ತಕ್ಕಂತೆ ಬಸ್‌ಗಳು ಕಾರ್ಯಾಚರಿಸುತ್ತಿರುತ್ತವೆ. ಎಲ್ಲ ಬಸ್‌ಗಳು ಕ್ಯೂಆರ್-ಕೋಡ್ ಟಿಕೆಟ್‌ ಸೇವೆ ನೀಡುವ ಸೌಲಭ್ಯ ಹೊಂದಿವೆ. ಹೀಗಾಗಿ ದುಬಾರಿ ದರ ಕೊಟ್ಟು ಕ್ಯಾಬ್‌ಗಳಲ್ಲಿ ಓಡಾಡುವುದಕ್ಕಿಂತ ವಾಯು ವಜ್ರ ಬಸ್‌ಗಳಲ್ಲಿ ಓಡಾಡಿದರೆ ಸುರಕ್ಷತೆಯ ಜೊತೆಗೆ ಹಣವೂ ಕಡಿಮೆ ಎನ್ನುವುದು ಪ್ರಯಾಣಿಕರ ಅಭಿಪ್ರಾಯವಾಗಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್
eedina app