ಆರೋಗ್ಯ ಇಲಾಖೆ ಗುತ್ತಿಗೆ ನೌಕರರ 'ಬೆಂಗಳೂರು ಚಲೋ'| ಬಿಜೆಪಿ ಯೂನಿಯನ್ V/S ಬಿಜೆಪಿ ಸರ್ಕಾರ

Health
  • ಗುತ್ತಿಗೆ ನೌಕರರಿಂದ ಜೂನ್ 7ರಂದು 'ಬೆಂಗಳೂರು ಚಲೋ'
  • ಸ್ವಪಕ್ಷದ ವಿರುದ್ಧವೇ ಆಯನೂರು ಮಂಜುನಾಥ್‌ ಹೋರಾಟ

ಜುಲೈ 7ರಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ‘ಬೆಂಗಳೂರು ಚಲೋ’ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ಅವರು ಕೆಲಕಾಲದ ಹಿಂದೆ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದು, ಸರ್ಕಾರದಿಂದ ಯಾವ ಸಕಾರಾತ್ಮಕ ಪ್ರತಿಕ್ರಿಯೆಯೂ ಬಾರದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಗೆ ಮಹತ್ವ ಬಂದಿದೆ.

ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಲ್ಲದೇ, ಎನ್ ಎಚ್ ಎಂ (ರಾಷ್ಟ್ರೀಯ ಆರೋಗ್ಯ ಅಭಿಯಾನ) ಅಡಿಯಲ್ಲಿ 20 ಸಾವಿರಕ್ಕೂ ಹೆಚ್ಚು ಒಳಗುತ್ತಿಗೆ ನೌಕರರೂ ಇದ್ದಾರೆ. ಎನ್ ಎಚ್ ಎಂ ನೌಕರರು ಇಡೀ ದೇಶದಲ್ಲಿದ್ದು, ಅವರೆಲ್ಲರೂ ಸಮಾನ ಬೇಡಿಕೆಗಳನ್ನಿಟ್ಟುಕೊಂಡು ದೀರ್ಘ ಕಾಲದಿಂದ ಹೋರಾಟ ಮಾಡುತ್ತಿದ್ದಾರೆ. ಕೆಲವು ರಾಜ್ಯಗಳಲ್ಲಿ ಸದರಿ ಎನ್ ಎಚ್ ಎಂ ನೌಕರರು ಮಾನವ ಸಂಪನ್ಮೂಲ ನೀತಿಯಡಿ ಸೇವಾ ಭದ್ರತೆ ಅಥವಾ ಹೆಚ್ಚಿನ ವೇತನಗಳನ್ನು ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಅವರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈದಿನ.ಕಾಮ್ ಈ ಗುತ್ತಿಗೆ ನೌಕರರಲ್ಲಿ ಹಲವರ ಜೊತೆಗೆ ಮಾತನಾಡಿದಾಗ ತಿಳಿದುಬಂದ ಸಂಗತಿಗಳಿವು.

ಕೋವಿಡ್ ಪೂರ್ವ ಅವಧಿಯಲ್ಲೇ ಸಂಘಟಿತರಾಗಿ ಹಲವು ಹೋರಾಟಗಳನ್ನು ಸದರಿ ನೌಕರರು ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಈ ಸಂಘಟನೆಯು ಬಿಜೆಪಿ ಜೊತೆಗೆ ಸಂಬಂಧವಿರುವ ಬಿಎಂಎಸ್ ಯೂನಿಯನ್ ತೆಕ್ಕೆಗೆ ಜಾರಿತು. ಅಲ್ಲಿಂದಾಚೆಗೆ ಬಿಜೆಪಿಯ ಶಾಸಕ ಆಯನೂರು ಮಂಜುನಾಥ್ ಅವರು ಯೂನಿಯನ್‌ನ ಗೌರವಾಧ್ಯಕ್ಷರೂ ಆದರು. ಆನಂತರ ಸ್ವತಃ ಬಿಜೆಪಿ ಸರ್ಕಾರವೇ ಬಂದಿದ್ದರಿಂದ, ನೌಕರರು ವಿಶೇಷ ನಿರೀಕ್ಷೆಗಳೊಂದಿಗೆ ಸರ್ಕಾರದ ಜೊತೆಗೆ ಸಭೆಗಳನ್ನು ನಡೆಸಿದರು.

ಅದರ ಫಲವಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ ಅವರ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗಿ ಕೆಲವು ಶಿಫಾರಸ್ಸುಗಳನ್ನು ಮಾಡಿತ್ತು. ಆ ಸಮಿತಿಯು ೨೦೨೦ರ ಡಿಸೆಂಬರ್‌ನಲ್ಲೇ ವರದಿ ನೀಡಿತ್ತು. ಮೊದಲು ಹೋರಾಟ ಮಾಡಿದಾಗ ಶ್ರೀರಾಮುಲು ಅವರು ಸಚಿವರಾಗಿದ್ದು, ವರದಿ ಜಾರಿ ಮಾಡುವ ಹೊತ್ತಿಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಸುಧಾಕರ್ ಅವರಿಗೇ ಆರೋಗ್ಯ ಇಲಾಖೆಯ ಜವಾಬ್ದಾರಿಯೂ ಸಿಕ್ಕಿತ್ತು. ಆದರೆ, ಅಲ್ಲಿಂದ ಮುಂದಕ್ಕೆ ಈ ವಿಚಾರದಲ್ಲಿ ಒಂದು ಹೆಜ್ಜೆಯೂ ಮುಂದಕ್ಕಿಡದೇ ಹೋದದ್ದು, ಆಯನೂರು ಮಂಜುನಾಥ್ ಅವರನ್ನು ಕೆರಳಿಸಿತ್ತು.

ಈ ಸುದ್ದಿ ಓದಿದ್ದೀರಾ?:  ಕರ್ನಾಟಕದ ಪೌರಕಾರ್ಮಿಕರಿಗೆ ಅಭಿನಂದನೆಗಳು: ಈ ಮಹತ್ವದ ಗೆಲುವು ಗುತ್ತಿಗೆ ಕಾರ್ಮಿಕರೆಲ್ಲರನ್ನೂ ಮುನ್ನಡೆಸಲಿ

ಆಯನೂರು ಅವರು ಜೂನ್ 6ರಂದು ಪತ್ರಿಕಾಗೋಷ್ಠಿ ನಡೆಸಿ ‘ಸುಧಾಕರ್ ದಪ್ಪ ಚರ್ಮದ ಅಸಮರ್ಥ ಮಂತ್ರಿ’ ಎಂದು ಹರಿಹಾಯ್ದಿದ್ದರು. ಈ ಬೆಳವಣಿಗೆಯ ನಂತರವೂ ಯಾವ ಬದಲಾವಣೆಯೂ ಕಾಣದ್ದರಿಂದ ಇದೀಗ ಆರೋಗ್ಯ ಇಲಾಖೆ ಗುತ್ತಿಗೆ ನೌಕರರು ಮತ್ತೆ ಹೋರಾಟದ ಹಾದಿ ಹಿಡಿಯಬೇಕಿದೆ ಎಂದು ಗುತ್ತಿಗೆ ನೌಕರರು ಹೇಳುತ್ತಾರೆ.

ಕಮ್ಯುನಿಸ್ಟ್ ಹಾಗೂ ದಲಿತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪೌರ ಕಾರ್ಮಿಕರ ಹೋರಾಟದಲ್ಲಿ ಇದಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಇದೇ ಸರ್ಕಾರದಿಂದ ಕಾಯಂ ಮಾಡಿಕೊಳ್ಳುವ ಭರವಸೆ ಸಿಕ್ಕಿದೆ. ಆದರೆ ಬಿಜೆಪಿಯ ಜೊತೆಗೆ ಸಂಬಂಧವಿರುವ ಯೂನಿಯನ್ ಇಟ್ಟುಕೊಂಡಿದ್ದರೂ ತಮಗೆ ಯಾವ ಅನುಕೂಲವೂ ಸಿಕ್ಕಿದೇ ಇರುವುದು ವಿಪರ್ಯಾಸ ಎಂದು ಹಾವೇರಿ ಜಿಲ್ಲೆಯ (ಹೆಸರು ಹೇಳಲಿಚ್ಛಿಸದ) ಎನ್ ಎಚ್ ಎಂ ನೌಕರರು ಹೇಳಿದ್ದಾರೆ.

ಶ್ರೀನಿವಾಸಾಚಾರಿ ಸಮಿತಿ ವರದಿ ಪೂರ್ಣ ಜಾರಿಯಾದರೂ ಅದು ಕಾಯಮಾತಿ ಅಲ್ಲ ಮತ್ತು ಹೊರಗುತ್ತಿಗೆಯಲ್ಲಿರುವ ನೌಕರರಿಗೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರಿಗೆ ಅದರಿಂದ ಹೆಚ್ಚೇನೂ ಅನುಕೂಲ ಆಗುವುದಿಲ್ಲವೆಂದು ಶಿಗ್ಗಾಂವ್ ತಾಲೂಕಿನ ಗುತ್ತಿಗೆ ನೌಕರರು ಬೇಸರ ವ್ಯಕ್ತಪಡಿಸಿದರು.

ನಾಳಿನ ಹೋರಾಟದ ನಂತರ ಪೌರ ಕಾರ್ಮಿಕರಿಗೆ ಸಿಕ್ಕ ರೀತಿಯಲ್ಲಿ ಲಿಖಿತ ರೂಪದ ಸ್ಪಷ್ಟ ಭರವಸೆಯು ಆರೋಗ್ಯ ಇಲಾಖೆಯ ನೌಕರರಿಗೂ ಸಿಗಬಹುದೇ ಎಂಬ ಪ್ರಶ್ನೆಯೊಂದಿಗೆ ರಾಜ್ಯದ ಹಲವು ಜಿಲ್ಲೆಗಳ ನೌಕರರು ಪ್ರತಿಭಟನೆಗೆ ಬರುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app