ಬೆಂಗಳೂರು | ಸೆ.25ಕ್ಕೆ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ರಾಜಕೀಯ ಜಾಗೃತಿ ಸಮಾವೇಶ

RPIK
  • ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ನಿಲ್ಲದ ಶೋಷಿತರ ಬವಣೆ
  • ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ಪದ್ಧತಿ ಜಾರಿಗೊಳಿಸಿದ್ದ ಅಂಬೇಡ್ಕರ್

ರಾಜ್ಯದಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ರಾಜಕೀಯ ಜಾಗೃತಿಯನ್ನುಂಟು ಮಾಡಲು ಸೆಪ್ಟೆಂಬರ್ 25ರಂದು ಬೆಂಗಳೂರಿನ ಟೌನ್ ಹಾಲ್‌ನಲ್ಲಿ ರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಆರ್ ಮೋಹನ್ ರಾಜ್ ಹೇಳಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, "ದಲಿತರ ಮತ್ತು ಶೋಷಿತರ ಸ್ವಾಭಿಮಾನದ ರಾಜಕಾರಣಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾನ ರಾಜಕೀಯ ಮೀಸಲಾತಿ ಪದ್ಧತಿ ಜಾರಿಗೊಳಿಸಿದ್ದರು" ಎಂದು ತಿಳಿಸಿದರು. 

"ಮಹಾತ್ಮ ಗಾಂಧಿಯವರು ಈ ಪದ್ಧತಿಯಿಂದ ಹಿಂದೂ ಸಮಾಜ ಹೊಡೆದು ಹೋಗುತ್ತದೆ ಎಂದು ವಿರೋಧ ವ್ಯಕ್ತಪಡಿಸಿ ಉಪವಾಸ ಸತ್ಯಾಗ್ರಹ ನಡೆಸಿದ ಹಿನ್ನೆಲೆಯಲ್ಲಿ 1932 ಸೆಪ್ಟೆಂಬರ್ 24ರಂದು ಯರವಾಡ ಜೈಲಿನಲ್ಲಿ ಮಹಾತ್ಮ ಮತ್ತು ಬಾಬಾ ಸಾಹೇಬರ್ ಮಧ್ಯ ಪೂನಾ ಒಪ್ಪಂದ ನಡೆಯುತ್ತದೆ. ಅಲ್ಲಿಂದ ದಲಿತ, ಆದಿವಾಸಿ ಹಾಗೂ ಹಿಂದುಳಿದವರ ಗುಲಾಮಗಿರಿ ರಾಜಕಾರಣ ಆರಂಭವಾಯಿತು" ಎಂದರು.

"ಇಂದು ಶೋಷಿತ ಸಮುದಾಯಗಳ ಬದುಕು ಅತಂತ್ರಗೊಂಡಿದೆ. ನೀರಿನ ಮಡಿಕೆ ಮುಟ್ಟಿದರೆ ಕೊಲೆ, ದೇವರ ಕಟ್ಟೆ ಮುಟ್ಟಿದರೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದಾರೆ. ಸ್ವಾತಂತ್ರ ಬಂದು 75 ವರ್ಷ ಕಳೆದರೂ ಶೋಷಿತ ಸಮುದಾಯಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿಲ್ಲ. ಆಡಳಿತ ನಡೆಸುವ ಎಲ್ಲ ಪಕ್ಷಗಳು ಬಂಡವಾಳಶಾಹಿ ಕಂಪನಿಗಳ ಪರವಾಗಿವೆ" ಎಂದು ಅಕ್ರೋಶ ವ್ಯಕ್ತಪಡಿಸಿದರು. 

ಈ ಸುದ್ದಿ ಓದಿದ್ದೀರಾ?; ಅಂಬೇಡ್ಕರ್‌ ಅವರ 'ಜಾತಿ ವಿನಾಶ' | ಭಾಗ 14 | ಜಾತಿ ಉಳಿಸಿಕೊಳ್ಳುವ ಆತಂಕದಲ್ಲೇ ಕಳೆದುಹೋಗುತ್ತದೆ ಹಿಂದೂಗಳ ಇಡೀ ಜೀವನ!

"ರಾಜ್ಯದಲ್ಲಿ ಮುಂದುವರೆದ ಸಮುದಾಯವಾದ ವೀರಶೈವ ಜಂಗಮರು, ನಾವು ಬೇಡ ಬುಡ್ಗ ಜಂಗಮರೆಂದು ಸುಳ್ಳು ಹೇಳಿ ಎಸ್‌ಸಿ ಮೀಸಲಾತಿ ಕಬಳಿಕೆ ಮಾಡಲು ಹುನ್ನಾರ ನಡೆಸಿದ್ದಾರೆ. ಪಿಟಿಸಿಎಲ್ ಕಾಯಿದೆ, ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣ ಕೋತಾ ಆಗುತ್ತಿರುವ ಬಗ್ಗೆ ಸದನ ಮತ್ತು ಸಂಸತ್ತಿನಲ್ಲಿ ಮೀಸಲಾತಿಯಿಂದ ಆಯ್ಕೆಯಾದ ಯಾವ ಶಾಸಕರು ಧ್ವನಿ ಎತ್ತುತ್ತಿಲ್ಲ" ಎಂದು ಕಿಡಿಕಾರಿದರು.

"ಈ ಹಿನ್ನೆಲೆಯಲ್ಲಿ ಪರ್ಯಾಯ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಪರ್ಯಾಯ ರಾಜಕಾರಣ ಕುರಿತು ಚರ್ಚಿಸಲು ಇದೇ ಸೆಪ್ಟೆಂಬರ್ 25ರಂದು ಜಾಗೃತಿ ರಾಜ್ಯ ಸಮಾವೇಶ ಹಮ್ಮಿಕೊಂಡಿದ್ದು, ರಾಜ್ಯದ 31 ಜಿಲ್ಲೆಗಳ ದಲಿತ ಸಂಘಟನೆಗಳ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು, ಸಾಹಿತಿ ಹಾಗೂ ಬರಹಗಾರರು ಭಾಗವಹಿಸುತ್ತಾರೆ" ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಬಸವರಾಜ ಕೌತಾಳ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್