ಬೆಂಗಳೂರು | ಮಧ್ಯದ ಬೆರಳು ತೋರಿಸಿ ನಿಂದನೆ ಪ್ರಕರಣ: ಬಿಎಂಟಿಸಿ ಬಸ್ ಚಾಲಕ ಅಮಾನತು

  • ಬಸ್ ಮುಂದೆ ಹೋಗಲು ಬಿಡದೆ ಸತಾಯಿಸಿದ್ದ ಬೈಕ್‌ ಸವಾರ
  • ಮಧ್ಯದ ಬೆರಳು ತೋರಿ ನಿಂದನೆ: ಕುಪಿತ ಚಾಲಕನಿಂದ ಹಲ್ಲೆ

ಓವರ್‌ಟೇಕ್‌ ವಿಷಯದಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದ ಮೇಲೆ ಬಿಎಂಟಿಸಿ ಚಾಲಕನೊಬ್ಬನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

ಬಸ್ ಓವರ್ ಟೇಕ್ ಮಾಡುವಾಗ, ಸಂದೀಪ್ ಭೋನಿಫೇಸ್ (44) ಎಂಬ ದ್ವಿಚಕ್ರ ವಾಹನ ಸವಾರ, ಆನಂದ್‌ ಎಂಬ ಬಿಎಂಟಿಸಿ ಬಸ್ ಚಾಲಕನಿಗೆ ಮಧ್ಯದ ಬೆರಳು ತೋರಿಸಿ‌ ಅಪಮಾನಿಸಿದ್ದ. ಅಲ್ಲದೆ, ಬಸ್ಸಿನೊಳಗೆ ಬಂದು ಚಾಲಕನಿಗೆ ನಿಂದಿಸಿದ್ದ. ಆಗ ಕುಪಿತಗೊಂಡ ಚಾಲಕ ಆನಂದ್‌, ಬೈಕ್‌ ಸವಾರ ಸಂದೀಪ್‌ಗೆ ಪ್ರಯಾಣಿಕರ ಎದುರೇ ಹಿಗ್ಗಾಮುಗ್ಗಾ ಥಳಿಸಿದ್ದ. ನ.22ರಂದು ಯಲಹಂಕದ ಪುಟ್ಟೇನಹಳ್ಳಿಯ, ನ್ಯೂ ಟೌನ್ ಬಳಿ ಈ ಘಟನೆ ನಡೆದಿತ್ತು.

ಬಸ್‌ ಪ್ರಯಾಣಿಕರು, ಬಸ್‌ ಚಾಲಕ ಮತ್ತು ಬೈಕ್‌ ಸವಾರರ ನಡುವಿನ ಹೊಡೆದಾಟದ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಈ ವಿಡಿಯೋ ಇದೀಗ ವೈರಲ್ ಆದ ನಂತರ ಚಾಲಕ ಆನಂದ್‌ ಅವರನ್ನು ಅಮಾನತುಗಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಸಭೆಗೆ ಬಂದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೃದಯಾಘಾತದಿಂದ ನಿಧನ

ಏನಿದು ಘಟನೆ?

ಯಲಹಂಕ ಮಾರ್ಗವಾಗಿ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಮುಂದೆ ಹೋಗಲು ಜಾಗ ಬಿಡದೇ ಬೈಕ್‌ ಸವಾರ ಸತಾಯಿಸುತ್ತಿದ್ದ. ಅದರಿಂದಾಗಿ ಬಸ್ ಚಾಲಕ, ಬೈಕ್ ಸವಾರನಿಗೆ ಬೈದಿದ್ದ. ಆಗ ಬೈಕ್‌ ಸವಾರ, ಬೈಕ್ ನಿಲ್ಲಿಸಿ, ಬಸ್‌ನೊಳಗೇ ಬಂದು ಬಸ್ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದು, ಚಾಲಕನಿಗೆ ಬಾಯಿಗೆ ಬಂದಂತೆ ಬೈದಿದ್ದ. ಅಲ್ಲದೆ, ಮಧ್ಯದ ಕೈಬೆರಳು ತೋರಿಸಿ ನಿಂದಿಸಿದ್ದ. ಅಶ್ಲೀಲವಾದ ಆ ಸನ್ನೆಯಿಂದ ಕೋಪಗೊಂಡ ಬಸ್ ಚಾಲಕ‌, ಬೈಕ್‌ ಸವಾರನಿಗೆ ಹಿಡಿದು ಮನಬಂದಂತೆ ಹೊಡೆದಿದ್ದ. ಹಲ್ಲೆಯಿಂದಾಗಿ ದ್ವಿಚಕ್ರ ವಾಹನ ಸವಾರನ ಕಿವಿ, ಮೊಣಕಾಲು, ಪಕ್ಕೆಲುಬು ಸೇರಿದಂತೆ ಕೆಲ ಭಾಗಗಳಲ್ಲಿ ಗಂಭೀರ ಗಾಯವಾಗಿದೆ.

ಈ ಘಟನೆಯ ನಂತರ, ಬಸ್‌ ಚಾಲಕನ ವಿರುದ್ಧ ವಾಹನ ಸವಾರ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಬಳಿಕ ಬಸ್ ಚಾಲಕ ಆನಂದ್ ಕೂಡ ಪ್ರತಿದೂರು ದಾಖಲಿಸಿದ್ದ. ಇದೀಗ ಹಲ್ಲೆ ಘಟನೆ ವಿಡೀಯೋ ವೈರಲ್‌ ಹಿನ್ನೆಲೆಯಲ್ಲಿ ಬಿಎಂಟಿಸಿ, ಬಸ್ ಚಾಲಕನನ್ನು ಅಮಾನತುಗೊಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app