
- ನಿಲ್ದಾಣವನ್ನು ₹380 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ
- ಈಗಾಗಲೇ ನಿಲ್ದಾಣದ ಮೊದಲ ಹಂತದ ಕಾಮಗಾರಿ ಪ್ರಾರಂಭ
ಯಶವಂತಪುರ ರೈಲು ನಿಲ್ದಾಣ ನವೀಕರಿಸುವ ಕಾರ್ಯ ಪ್ರಾರಂಭವಾಗಿದ್ದು, ಜೂನ್ 2025 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ನೈಋತ್ಯ ರೈಲ್ವೆ ಸೋಮವಾರ ತಿಳಿಸಿದೆ.
ಜೂನ್ 20, 2022ರಂದು ಪ್ರಧಾನಿ ನರೇಂದ್ರ ಮೋದಿ ಅವರು ಯಶವಂತಪುರ ರೈಲು ನಿಲ್ದಾಣದ ನವೀಕರಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಗಿರ್ಧಾರಿ ಲಾಲ್ ಕನ್ಸ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ಗೆ ಅಕ್ಟೋಬರ್ 18 ರಂದು ಟೆಂಡರ್ ನೀಡಲಾಗಿದೆ. ನಿಲ್ದಾಣವನ್ನು ₹380 ಕೋಟಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ.
ಪ್ರಸ್ತುವಿರುವ ನಿಲ್ದಾಣ 60,000 ಜನರ ಬಳಕೆಗೆ ಯೋಗ್ಯವಾಗಿದ್ದು, ಪುನರಾಭಿವೃದ್ಧಿಗೊಂಡ ಬಳಿಕ ನಿಲ್ದಾಣದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ಸಂಚರಿಸುವ ನಿರೀಕ್ಷೆಯಿದೆ.
ನಿಲ್ದಾಣದ ಮೊದಲ ಹಂತದ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದೆ. ಈ ನಿಲ್ದಾಣವು 'ಸಿಟಿ ಸೆಂಟರ್' ಆಗಿ ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ತಲಾ 216 ಮೀಟರ್ನಷ್ಟು ಅಗಲವಾದ ಪ್ರತ್ಯೇಕ ದ್ವಾರಗಳ ವ್ಯವಸ್ಥೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
"ಈ ಯೋಜನೆ 'ಟರ್ನ್ ಕೀ' ಮಾದರಿಯದ್ದಾಗಿದೆ. ರೂಫ್ ಪ್ಲಾಜಾದಲ್ಲಿ ಮಳಿಗೆ, ಫುಡ್ ಕೋರ್ಟ್, ಮನರಂಜನಾ ತಾಣಗಳಿರಲಿವೆ. ನಿಲ್ದಾಣದ ಆವರಣದಲ್ಲಿ ಎಲ್ಇಡಿ ಆಧಾರಿತ ಸೂಚನಾ ಫಲಕಗಳನ್ನು ಹಾಕಲಾಗುತ್ತದೆ. ಬಹುಅಂತಸ್ತಿನ ಕಾರು ಪಾರ್ಕಿಂಗ್ ಇರಲಿದೆ. ಮೆಟ್ರೊ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ" ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಬಿಎಂಪಿ ಕಸದ ಲಾರಿಗೆ ಮತ್ತಿಬ್ಬರು ಯುವಕರ ಬಲಿ; ಈ ಸಾವುಗಳಿಗೆ ಹೊಣೆ ಯಾರು?
"ರ್ಯಾಂಪ್ಗಳು, ಲಿಫ್ಟ್ಗಳು ಮತ್ತು ವಿಶೇಷ ಶೌಚಾಲಯಗಳನ್ನು ಒದಗಿಸುವ ಮೂಲಕ ಪುನರಾಭಿವೃದ್ಧಿಗೊಂಡ ನಿಲ್ದಾಣವನ್ನು ದಿವ್ಯಾಂಗ ಸ್ನೇಹಿಯನ್ನಾಗಿ ಮಾಡಲು ವಿಶೇಷ ಒತ್ತು ನೀಡಲಾಗಿದೆ. ಇಂಧನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ಗಮನ ನೀಡಲಾಗಿದೆ. 'ಹಸಿರು' ಕಟ್ಟಡವಾಗಿ ಕಟ್ಟಡವನ್ನು ವಿನ್ಯಾಸಗೊಳಿಸಲಾಗುವುದು. ಘನತ್ಯಾಜ್ಯವನ್ನು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮಗಳು, ತ್ಯಾಜ್ಯನೀರಿನ ಹೊರಹರಿವು ಮತ್ತು ನೀರನ್ನು ಸಂರಕ್ಷಿಸಲು ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು" ಎಂದು ಹೇಳಿದೆ.