
- ಇವಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ
- ಇವಿ ರ್ಯಾಲಿಯಲ್ಲಿ 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು
ಬೆಂಗಳೂರಿನಲ್ಲಿ ಒಂದು ವಾರದ ಅವಧಿಯ ವಿದ್ಯುತ್ ಚಾಲಿತ ವಾಹನ (ಇವಿ)ಗಳ ಅಭಿಯಾನದ ಭಾಗವಾಗಿ ಬೆಸ್ಕಾಂ ಆಯೋಜಿಸಿದ್ದ, ಇವಿ ರ್ಯಾಲಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇಂಧನ ಸಚಿವ ವಿ ಸುನಿಲ್ ಕುಮಾರ್ ಉದ್ಘಾಟಿಸಿದರು.
ವಿಧಾನಸೌಧದಿಂದ ಅರಮನೆ ಮೈದಾನದ ಚಾಮರ ವಜ್ರ ಸಭಾಂಗಣದವರೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ತಾವೇ ಚಲಾಯಿಸುವ ಮೂಲಕ ಸಚಿವರು ಇವಿ ರ್ಯಾಲಿಗೆ ಚಾಲನೆ ನೀಡಿದರು. ಸುಮಾರು 300ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ಇವಿ ರ್ಯಾಲಿಯಲ್ಲಿ ಭಾಗವಹಿಸಿದ್ದವು.
"ಹಸಿರು ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ಬೆಸ್ಕಾಂ ಇವಿ ರ್ಯಾಲಿಯನ್ನು ಹಮ್ಮಿಕೊಂಡಿತ್ತು. ಇವಿ ಬಳಕೆಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ದೇಶದ ಇವಿ ರಾಜಧಾನಿಯಾಗಲಿದೆ" ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪೌರ ಕಾರ್ಮಿಕರ ಮುಷ್ಕರದಿಂದ ಬಿಬಿಎಂಪಿಗೆ ಯಾವುದೇ ಸಮಸ್ಯೆ ಇಲ್ಲ : ಬಿಬಿಎಂಪಿ ವಿಶೇಷ ಆಯುಕ್ತ
"ಇವಿ ಚಾರ್ಜಿಂಗ್ ಸ್ಟೇ಼ಷನ್ ನಿರ್ಮಾಣ, ಇವಿ ಉತ್ಪಾದನೆಗೆ ಬೆಂಬಲ, ಬ್ಯಾಟರಿ ತಯಾರಿಕೆ ಘಟಕ ನಿರ್ಮಾಣ ಮುಂತಾದ ಇವಿ ಸಂಬಂಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ಇವಿ ಬಳಕೆಯಾಗುವಂತೆ ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಆದ್ಯತೆಯಾಗಿದೆ" ಎಂದು ಸಚಿವರು ಅಭಿಪ್ರಾಯಪಟ್ಟರು.
"ಬೆಸ್ಕಾಂ ಆಯೋಜಿಸಿರುವ ಮೂರು ದಿನಗಳ ಇವಿ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇವಿ ಕೃಷಿ ಸಂಬಂಧಿ ಉಪಕರಣಗಳು ಮತ್ತು ಮಿನಿ ಟ್ರಾಕ್ಟರ್ಗಳನ್ನು ಮಳಿಗೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ" ಎಂದು ಹೇಳಿದರು.