ಆಯುಧ ಪೂಜೆ | ಬಸ್ಸಿಗೆ ₹100 ಕೊಟ್ಟ ಸಾರಿಗೆ ಸಂಸ್ಥೆಗಳು! ಬಿಡಿಗಾಸಿಗೆ ಏನು ಬರುತ್ತೆ ಅಂದ್ರು ಸಿಬ್ಬಂದಿ!

  • ₹100ಗೆ ಬಸ್ ಅಲಂಕರಿಸಿ ಪೂಜೆ ಮಾಡುವುದು ಅಸಾಧ್ಯ
  • ಬಿಡಿಗಾಸು ನೀಡಿದ ನಿಗಮದ ವಿರುದ್ಧ ಸಿಬ್ಬಂದಿ ಅಸಮಾಧಾನ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‍‌ಟಿಸಿ) ದಸರಾ ಹಬ್ಬದ ಹಿನ್ನೆಲೆಯಲ್ಲಿ ಬಸ್ಸುಗಳ ಆಯುಧ ಪೂಜೆಗೆ ಪ್ರತಿ ಬಸ್ಸಿಗೆ ₹100 ಬಿಡುಗಡೆ ಮಾಡಿವೆ.

ಈ ಬಿಡಿಗಾಸಿನ ಬಿಡುಗಡೆ ವಿಷಯ ಒಂದು ಕಡೆ ಸಿಬ್ಬಂದಿಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದರೆ, ಮತ್ತೊಂದು ಕಡೆ ಸಾರ್ವಜನಿಕರ ವಿಡಂಬನೆಗೆ ಈಡಾಗಿದೆ.

ಆಯುಧ ಪೂಜೆಯ ದಿನ ವಾಹನ ಪೂಜೆ ಮಾಡುವುದು ವಾಡಿಕೆ. ಅಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮಾತ್ರವಲ್ಲದೆ ಎಲ್ಲಾ ಸರ್ಕಾರಿ ಇಲಾಖೆಗಳ ವಿವಿಧ ವಾಹನಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ಅದಕ್ಕಾಗಿ ಸಂಬಂಧಪಟ್ಟ ಸಂಸ್ಥೆ, ಇಲಾಖೆಗಳೂ ಪ್ರತ್ಯೇಕ ಹಣ ಬಿಡುಗಡೆ ಮಾಡುತ್ತವೆ ಕೂಡ.

"ಬಸ್ಸುಗಳ ಸ್ವಚ್ಛತೆ, ಹೂ ಹಾರ ಹಾಕಿ ಅಲಂಕಾರ, ಪೂಜೆ ಸೇರಿದಂತೆ ಸಾವಿರಾರು ರೂಪಾಯಿ ಕರ್ಚಾಗುತ್ತದೆ. ಅದರಲ್ಲೂ ಹೂ, ಹಣ್ಣು, ಕಾಯಿಗಳು ದುಬಾರಿಯಾಗಿರುವ ಈ ದಿನಗಳಲ್ಲಿ ಇನ್ನಷ್ಟು ವಾಹನ ಪೂಜೆ ಕೂಡ ಅಧಿಕ ವೆಚ್ಚದ ವಿಷಯವಾಗಿದೆ. ಆದರೆ, ವಾಸ್ತವಿಕ ಕರ್ಚುವೆಚ್ಚಗಳನ್ನು ಗಣನೆಗೇ ತೆಗೆದುಕೊಳ್ಳದೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಿಡಿಗಾಸಿನ ಹಣ ನೀಡಿ ಕೈತೊಳೆದುಕೊಂಡಿವೆ" ಎಂದು ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬಿಎಂಟಿಸಿ ಕಡಿಮೆ ಹಣ ಬಿಡುಗಡೆ ಮಾಡಿದ್ದು, ಹಬ್ಬದ ದಿನ ಬಸ್‌ಗಳನ್ನು ಸುಂದರವಾಗಿ ಅಲಂಕರಿಸಬೇಕು ಎಂಬ ನಿರ್ವಾಹಕ ಮತ್ತು ಚಾಲಕರ ಆಸೆಗೆ ತಣ್ಣೀರೆರಚಿದೆ. ಕೆಎಸ್‌ಆರ್‌ಟಿಸಿ ಕೂಡ ತಲಾ ಬಸ್ಸಿಗೆ ಕೇವಲ ನೂರು ರೂಪಾಯಿ ನೀಡಿದ್ದು, ಸಹಜವಾಗೇ ಚಾಲಕರು ಮತ್ತು ನಿರ್ವಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಬೆಂಗಳೂರಿನಲ್ಲಿ ಆಟೋ ಬೆನ್ನೇರಿದ '40% ಸರ್ಕಾರ'

ಬಿಡುಗಡೆ ಮಾಡಿರುವ ಹಣದಲ್ಲಿ ಈಗಿನ ಕಾಲದಲ್ಲಿ ಪೂಜೆ ಮಾಡುವುದಕ್ಕೆ ಆಗುತ್ತಾ? ದುಬಾರಿ ದುನಿಯಾದಲ್ಲಿ ಒಂದು ನಿಂಬೆ ಹಣ್ಣಿನ ಬೆಲೆ ₹5 ಆಗಿದೆ. ಕುಂಬಳಕಾಯಿ ಬೆಲೆಯಂತೂ 200-250 ರೂ.ಗೆ ಏರಿದೆ. ಹಣ್ಣು ಹೂವಿನ ದರಗಳು ಕೂಡ ಹೆಚ್ಚಾಗಿವೆ. ₹100ನಲ್ಲಿ ಬಸ್ ಅಲಂಕರಿಸಿ, ಪೂಜೆ ಮಾಡುವುದು ಹೇಗೆ ಸಾಧ್ಯ ಎಂದು ಬಿಎಂಟಿಸಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀಡಿರುವ ₹100ಗೆ ಏನು ಬರುತ್ತೆ?

ಇಂದಿನ ಹಣ್ಣು- ಹೂವಿನ ದರದಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನೀಡಿರುವ 100 ರೂಪಾಯಿನಲ್ಲಿ ಏನೆಲ್ಲಾ ಕೊಳ್ಳಬಹುದು ಎಂಬುದಕ್ಕೆ ಈ ದಿನ.ಕಾಮ್‌ ಒಂದು ಚಿಕ್ಕ ಪಟ್ಟಿ ಮಾಡಿದೆ.

ಹೂವು- ಕನಿಷ್ಠ 200 ರೂ.

ನಾಲ್ಕು ಲಿಂಬೆಹಣ್ಣು- 20 ರೂ.

ತೆಂಗಿನಕಾಯಿ ಒಂದಕ್ಕೆ- 25 ರೂ.

ಬಾಳೆಹಣ್ಣು, ಅರ್ಧ ಕೆಜಿ- 40 ರೂ.

ಅರಿಶಿಣ-ಕುಂಕುಮ- 20 ರೂ.

ಕುಂಬಳಕಾಯಿ- ಕನಿಷ್ಠ 200 ರೂ.

ಅಗರಬತ್ತಿ- 20 ರೂ>

-------------------------

ಒಟ್ಟು ಪೂಜೆ ಖರ್ಚು- ₹525

ಬಿಎಂಟಿಸಿಗೆ ಈ ವಾಸ್ತವಿಕ ಲೆಕ್ಕ ಕೂಡ ಗೊತ್ತಿಲ್ಲವೆ? ಎಂಬುದು ಸಿಬ್ಬಂದಿ ಪ್ರಶ್ನೆ.

ನಿಮಗೆ ಏನು ಅನ್ನಿಸ್ತು?
6 ವೋಟ್