ಬೆಂಗಳೂರು | ಬಸ್‌ ಟ್ರಾಕ್ ಮಾಡುವ ನೂತನ 'ನಿಮ್‌ ಬಸ್' ಆ್ಯಪ್ ಬಿಡುಗಡೆ ಬಿಎಂಟಿಸಿ ಸಿದ್ಧತೆ

  • ನಾಲ್ಕು ಸಾವಿರ ಬಸ್‌ಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ಯಂತ್ರ ಅಳವಡಿಕೆ
  • 'ನಿಮ್ ಬಸ್' ಆಪ್ ಅನ್ನು ಡಿ.31ರ ಒಳಗೆ ಜನ ಬಳಕೆಗೆ ತರಲಾಗುವುದು

ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಟಿಸಿ) ಬಸ್‌ಗಳನ್ನು ಪ್ರಯಾಣಿಕರು ಹೆಚ್ಚು ಬಳಸುವಂತೆ ಮಾಡಲು ನಿಗಮ ಯೋಜನೆ ರೂಪಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಬಸ್ ಟ್ರಾಕ್ ಮಾಡುವ ‘ನಿಮ್ ಬಸ್’ ಎಂಬ ಹೊಸ ಆ್ಯಪ್ ಬಿಡುಗಡೆ ಮಾಡಲು ಮುಂದಾಗಿದೆ. 

ಬಸ್ ಬರುವ ಸಮಯ, ಹೊರಡುವ ಸಮಯ ಹಾಗೂ ಪ್ರಯಾಣಿಕರು ತೆರಳಬೇಕಾದ ಸ್ಥಳ, ಪ್ರಯಾಣಿಕರು ಯಾವ ಬಸ್‌ನಲ್ಲಿದ್ದಾರೆ ಎಂಬ ಮಾಹಿತಿ ನೀಡುವ 'ನಿಮ್ ಬಸ್' ಆಪ್ ಅನ್ನು ಡಿ. 15 ಮತ್ತು 31ರ ಒಳಗೆ ಜಾರಿಗೆ ತರಲಿದೆ. ಈ ಆ್ಯಪ್‌ನಲ್ಲಿ, ಸುಮಾರು 4,000 ಬಸ್‌ಗಳನ್ನು ಮಾತ್ರ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.

Eedina App

ಸದ್ಯಕ್ಕೆ ಬಿಎಂಟಿಸಿ ವ್ಯಾಪ್ತಿಯಲ್ಲಿ ನಾನ್-ಎಸಿ 5,200 ಬಸ್‌ಗಳಿದ್ದು, 400 ವೋಲ್ವೋ ಬಸ್‌ಗಳಿವೆ. ಒಟ್ಟಾರೆಯಾಗಿ 5,600 ಬಸ್‌ಗಳನ್ನು ಬಿಎಂಟಿಸಿ ಹೊಂದಿದೆ. ಇದೀಗ ಬಿಎಂಟಿಸಿ ನಾಲ್ಕು ಸಾವಿರ ಬಸ್‌ಗಳಲ್ಲಿ ಮಾತ್ರ ವೆಹಿಕಲ್ ಟ್ರ್ಯಾಕಿಂಗ್ ಯಂತ್ರವನ್ನು (ವಿಟಿಯು) ಅಳವಡಿಸಿದೆ. 

ಗೂಗಲ್ ಮ್ಯಾಪ್, ವಾಟ್ಸಾಪ್‌ನಲ್ಲಿರುವ ಕರೆಂಟ್ ಲೊಕೇಶನ್, 'ನಮ್ಮ ಮೆಟ್ರೋ'ಗಳಲ್ಲಿ ಚಾಲ್ತಿಯಲ್ಲಿರುವ ರೈಲು ಬರುವ ಸಮಯ ತಿಳಿಸುವ ಎಲೆಕ್ಟ್ರಿಕ್ ಮಷಿನ್‌ಗಳಂತೆ ಪ್ರಯಾಣಿಕರು ತಮ್ಮ ಸ್ಕ್ರೀನ್‌ ಟಚ್ ಮೊಬೈಲ್‌ಗಳಲ್ಲಿ ಬಸ್‌ಗಳನ್ನು ಟ್ರಾಕ್‌ ಮಾಡಬಹುದು ಎಂದು ಬಿಎಂಟಿಸಿ ತಿಳಿಸಿದೆ.

AV Eye Hospital ad

ಬಿಎಂಟಿಸಿ ವ್ಯಾಪ್ತಿಯಲ್ಲಿರುವ ಬಿಎಸ್-3 ಬಸ್‌ಗಳಲ್ಲಿ ಉತ್ತಮವಾದ ಬಸ್‌ಗಳಿಗೆ ಮಾತ್ರ ವಿಟಿಯು ಅಳವಡಿಸಲಾಗಿದೆ. ಉಳಿದಂತೆ ಬಿಎಂಟಿಸಿ ಹೊಂದಿರುವ ಮೂರು ಸಾವಿರ ಬಸ್‌ಗಳಾದ BS-4 ಮತ್ತು BS-6 ಬಸ್‌ಗಳಿಗೆ ವೆಹಿಕಲ್ ಟ್ರ್ಯಾಕಿಂಗ್ ಯಂತ್ರ ಅಳವಡಿಸಲಾಗಿದೆ. ಹಾಗಾಗಿ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿರುವ 'ನಿಮ್‌ ಬಸ್' ಆ್ಯಪ್ ಮೂಲಕ ಟ್ರ್ಯಾಕ್ ಮಾಡಬಹುದು.

ಈ ಆಪ್‌ ನಿಂದಾಗಿ, ಮಹಿಳೆಯರಿಗೆ ಸಹಾಯವಾಗುವಂತೆ 'ಎಸ್‌ಒಎಸ್‌' ಟ್ರ್ಯಾಕಿಂಗ್ ಅಳವಡಿಸಲಾಗಿದೆ. ಇದರ ಮೂಲಕ ಮಹಿಳೆಯರು ತಾವು ಯಾವ ಪ್ರದೇಶದಲ್ಲಿದ್ದಾರೆ. ಯಾವ್ ಬಸ್‌ನಲ್ಲಿದ್ದಾರೆ ಎಂಬ ಮಾಹಿತಿಯನ್ನು ತಮಗೆ ಬೇಕಾದವರಿಗೆ ಎಸ್‌ ಎಂ ಎಸ್‌ ಮೂಲಕ ಮಾಹಿತಿ ನೀಡಬಹುದು. 

ಸದ್ಯಕ್ಕೆ  ಅಪ್ಲಿಕೇಶನ್‌ನ ಪ್ರಾಯೋಗಿಕ ಪರಿಶೀಲನೆಯಾಗುತ್ತಿದೆ. ಅದರಲ್ಲಿರುವ ಲೋಪದೋಷಗಳನ್ನು ಕಂಡುಕೊಂಡು ಸರಿಪಡಿಸಿ ಡಿಸೆಂಬರ್ ಅಂತ್ಯದೊಳಗೆ ಪ್ರಯಾಣಿಕರ ಬಳಕೆಗೆ ತರಲಾಗುವುದು ಎಂದು ನಿಗಮ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಚಾಕ್‌ ಪೀಸ್‌ ಮುರಿದ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಹೊಲಿಗೆ ಬೀಳುವ ಹಾಗೆ ಹೊಡೆದ ಶಿಕ್ಷಕ!

ಬಿಎಂಟಿಸಿಯಿಂದ ಬಿಡುಗಡೆಯಾಗುತ್ತಿರುವ ಮೂರನೆಯ ಆಪ್ ಇದಾಗಿದೆ. 2016 ರಲ್ಲಿ, 'ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟೇಶನ್ ಸಿಸ್ಟಮ್' (ಐಟಿಎಸ್) ಯೋಜನೆಯನ್ನು ಪ್ರಾರಂಭಿಸಿತ್ತು. ಆದರೆ, ಇದರ ಉಸ್ತುವಾರಿ ಹೊತ್ತ ಗುತ್ತಿಗೆ ಸಂಸ್ಥೆಯೊಂದಿಗಿನ ಒಪ್ಪಂದದ ಅವಧಿ ಮುಗಿದ ನಂತರ, ಇದರ ಬಳಕೆ ಮಾಡಲು ಪ್ರಯಾಣಿಕರಿಗೆ ಸಾಧ್ಯವಾಗಲಿಲ್ಲ. 

2019ರಲ್ಲಿ 'ಮೈ ಬಿಎಂಟಿಸಿ' ಎಂಬ ಹೆಸರಿನ ಮತ್ತೊಂದು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಆದರೆ ಕೆಲವು ದೋಷಗಳಿಂದಾಗಿ ಅದು ಸಹ ಸ್ಥಗಿತಗೊಂಡಿತು. ಇದೀಗ ದೈನಂದಿನ, ಮಾಸಿಕ ಪಾಸ್‌ಗಳನ್ನು ಸುಲಭವಾಗಿ ಪಡೆಯಲು 'ಟ್ಯುಮೋಕ್‌' ಎಂಬ ಆ್ಯಪ್ ಇದೆ. ಆದರೆ, ಅದರಲ್ಲಿ ಟಿಕೆಟ್‌ ಪಡೆಯಲು ಸಾಧ್ಯವಿಲ್ಲ. 'ನಿಮ್‌ ಬಸ್‌' ಬಿಎಂಟಿಸಿಯ ಮೂರನೇ ಆ್ಯಪ್ ಆಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app