
- ಅನಾಮಧೇಯ ವ್ಯಕ್ತಿಗಳಿಂದ ಮೇಲ್: ಕಮಲ್ ಪಂತ್ ಸ್ಪಷ್ಟನೆ
- ಆರು ಶಾಲೆಗಳ ಬಳಿ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ
ಬೆಂಗಳೂರಿನ ಆರು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿಗಳು ಮೇಲ್ ಮಾಡಿ ಬೆದರಿಕೆ ಹಾಕಿರುವ ಘಟನೆ ಶುಕ್ರವಾರ ನಡೆದಿದೆ.
“ಬೆಂಗಳೂರಿನ ಹೊರವಲಯದ ಹೆಣ್ಣೂರಿನ ವಿನ್ಸೆಂಟ್ ಪಲ್ಲೋಟಿ ಶಾಲೆ, ಹೆಬ್ಬಗೋಡಿಯ ಎಬಿನೈಸರ್ ಶಾಲೆ ಸೇರಿದಂತೆ ಒಟ್ಟು ಆರು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿತ್ತು. ಆದರೆ ಬಾಂಬ್ ನಿಷ್ಕ್ರಿಯ ದಳದ ಪರಿಶೀಲನೆ ವೇಳೆ ಅಂತಹ ಯಾವುದೇ ಬಾಂಬ್ ಇಟ್ಟಿರುವುದು ಪತ್ತೆಯಾಗಿಲ್ಲ" ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
“ಸದ್ಯ ಆ ಎಲ್ಲ ಶಾಲೆಗಳ ಬಳಿ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರೀಯ ದಳ ಮತ್ತು ಶ್ವಾನದಳದೊಂದಿಗೆ ಪರಿಶೀಲನೆ ನಡೆಸಲಾಗಿದೆ. ಪ್ರಾಥಮಿಕ ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ನಕಲಿ ಮೇಲ್ ವಿಳಾಸ ಬಳಸಿ ಮೇಲ್ ಮಾಡಿರೋ ಶಂಕೆ ಹಿನ್ನೆಲೆ ಸೈಬರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ," ಎಂದು ಅವರು ವಿವರಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರಿನ 301 ಧಾರ್ಮಿಕ ಕೇಂದ್ರಗಳಿಗೆ ನೊಟೀಸ್: ಆಯುಕ್ತ ಕಮಲ್ ಪಂತ್
ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ ಮತ್ತು ಸಿಸಿಬಿ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಬೆನ್ನಲ್ಲೆ ಶಾಲೆಗಳಿಗೆ ಇಂಥ ಬೆದರಿಕೆ ಬಂದಿರೋದು ಆತಂಕ ಸೃಷ್ಟಿಸಿತ್ತು.