- 2021ರ ಮಾರ್ಚ್ 15ರಂದು ಜೀಪು ಪಲ್ಟಿ ಹೊಡೆದು ಅಪಘಾತ ಸಂಭವಿಸಿತ್ತು
- ನ.14ರಂದು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನಿಸಿ ಗೌರವಿಸಲಿರುವ ಸರ್ಕಾರ
ಜೀಪಿನಡಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಂದೆಯನ್ನು ಕಾಪಾಡಿದ ಉತ್ತರ ಕನ್ನಡ ಜಿಲ್ಲೆಯ ಬಾಲಕಿ, ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ 11 ವರ್ಷದ ಬಾಲಕಿ ಕೌಸಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯ ಸಮಯ ಪ್ರಜ್ಞೆಯನ್ನು ತೋರಿ ತಂದೆಯನ್ನು ಬದುಕಿಸಿದ ಸಾಹಸವನ್ನು ಮೆಚ್ಚಿ, ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಉದ್ಯಾನ ನಗರಿಯಲ್ಲಿ ಮೋಡ ಕವಿದ ವಾತಾವರಣ; ಇನ್ನೂ ಮೂರು ದಿನ ಮಳೆ ಸಾಧ್ಯತೆ
2021ರ ಮಾರ್ಚ್ 15ರಂದು ಮಾವಿನಗುಂಡಿ ಸಮೀಪದ ಹಳ್ಳಿಯೊಂದಕ್ಕೆ ಅಡುಗೆ ಮಾಡಲು ತಂದೆ ವೆಂಕಟರಮಣ ಹೆಗಡೆಯವರ ಜೊತೆಗೆ ಹನ್ನೊಂದು ವರ್ಷದ ಕೌಸಲ್ಯ ಹೆಗಡೆ ಮತ್ತು ಅವಳ ತಮ್ಮ ಪ್ರಯಾಣಿಸುತ್ತಿದ್ದರು. ವಾಹನ ಚಲಾಯಿಸುತ್ತಿದ್ದ ವೇಳೆ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದಿತ್ತು. ಇದರ ಪರಿಣಾಮ ಜೀಪಿನ ಅಡಿಯಲ್ಲಿ ವೆಂಕಟರಮಣ ಹೆಗಡೆ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು.
ಈ ಸಂದರ್ಭ ಕೌಸಲ್ಯ ಹೆಗಡೆ ಆಕೆಯ ಐದು ವರ್ಷದ ತಮ್ಮ ಮತ್ತು ತಂದೆಯನ್ನು ಬದುಕಿಸಿಕೊಳ್ಳಲು ಹರಸಾಹಸ ಪಟ್ಟಿದ್ದರು. ಪ್ರಯತ್ನ ಸಫಲವಾಗದಿದ್ದಾಗ, ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ದೂರ ಓಡಿ ಹೋಗಿ, ಅಲ್ಲಿಂದ ಜನರನ್ನು ಕರೆತಂದು ಜೀಪನ್ನು ಎತ್ತಿಸಿ ತಂದೆಯ ಜೀವ ಉಳಿಸಿದ್ದಳು. ಹೀಗಾಗಿ, ರಾಜ್ಯ ಸರ್ಕಾರವೂ ಈಕೆಯ ಸಾಧನೆಯನ್ನು ಗುರುತಿಸಿ, ನ.14ರ ಮಕ್ಕಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಬಾಲಕಿಗೆ ಪ್ರದಾನಿಸಿ, ಗೌರವಿಸಲಿದೆ.