ಚಿಲುಮೆ ವೋಟರ್‌ ಗೇಟ್‌ ಹಗರಣ | ಬಿಬಿಎಂಪಿ ವಿಶೇಷ ಆಯುಕ್ತ, ಬೆಂಗಳೂರು ಜಿಲ್ಲಾಧಿಕಾರಿ ಅಮಾನತು

  • ತನಿಖೆಗೆ ಆದೇಶಿಸಿದ ಕೇಂದ್ರ ಚುನಾವಣಾ ಆಯೋಗ
  • ಮತದಾರರ ಗೌಪ್ಯ ಮಾಹಿತಿ ಸಂಗ್ರಹ ಮಾಡಿದ್ದ ಚಿಲುಮೆ ಸಂಸ್ಥೆ

ಖಾಸಗಿ ಸಂಸ್ಥೆಯಿಂದ ಮತದಾರರ ಗೌಪ್ಯ ಮಾಹಿತಿ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ ರಂಗಪ್ಪ ಮತ್ತು ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಅವರನ್ನು ಅಮಾನತು ಮಾಡಿ, ಕೇಂದ್ರ ಚುನಾವಣೆ ಆಯೋಗವು ತನಿಖೆಗೆ ನ.25ರ ಶುಕ್ರವಾರ ಆದೇಶಿಸಿದೆ.

ಬೆಂಗಳೂರಿನ ಬಿಬಿಎಂಪಿ ವ್ಯಾಪಿಯಲ್ಲಿ ನಡೆದ ಮತದಾರರ ಐಡಿ ಕಾರ್ಡ್ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ಮಧ್ಯೆ ಪ್ರವೇಶ ಮಾಡಿದ್ದು, ಕರ್ನಾಟಕ ಚುನಾವಣೆ ಆಯೋಗಕ್ಕೆ ಚಾಟಿ ಬೀಸಿದೆ.

Eedina App

ಬಿಬಿಎಂಪಿ ಹೊರತುಪಡಿಸಿ ವೋಟರ್ ಐಡಿ ಪರಿಷ್ಕರಣೆಗೆ ವಿಶೇಷ ಅಧಿಕಾರಿ ನೇಮಕಕ್ಕೆ  ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಚುನಾವಣಾ ಆಯೋಗವು, ಈವರೆಗೆ ಸಂಗ್ರಹಿಸಿರುವ ಡೇಟಾ ಬಳಸದಂತೆಯೂ ಸೂಚಿಸಿದ್ದು, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಶೇ. 100ರಷ್ಟು ಮತದಾರರ ಪರಿಷ್ಕರಣೆ ನಡೆಯಬೇಕು. ಅಲ್ಲದೇ ಚಿಕ್ಕಪೇಟೆ, ಮಹದೇವಪುರ, ಶಿವಾಜಿನಗರ ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಕೇಂದ್ರ ಚುನಾವಣೆ ಆಯೋಗ ನಿರ್ದೇಶನ ನೀಡಿದೆ.

ಬಿಬಿಎಂಪಿಯ ಹೊರಗಿನ ವಿಶೇಷ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನೇಮಿಸಬೇಕು. ಮತದಾರರ ಪಟ್ಟಿಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಬೇಕು. ಅಕ್ರಮವಾಗಿ ಯಾವುದೇ ನೇರ ಅಥವಾ ಪರೋಕ್ಷ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ದಾಖಲೆ ಸಂಗ್ರಹಿಸಿರುವ ಬಗ್ಗೆ ಪತ್ತೆ ಹಚ್ಚಬೇಕು ಎಂದು ಎಲ್ಲ ಅಧಿಕಾರಿಗಳಿಗೆ ಚುನಾವಣಾ ಆಯೋಗವು ಖಡಕ್ ಸೂಚನೆ ನೀಡಿದೆ.

ಈ ಸುದ್ದಿ ಓದಿದ್ದೀರಾ? ಚಿಲುಮೆ ವೋಟರ್‌ ಗೇಟ್‌ | ಹಗರಣದಲ್ಲಿ ಕೇಂದ್ರ ಸರ್ಕಾರವೂ ಭಾಗಿ: ರಣದೀಪ್ ಸಿಂಗ್ ಸುರ್ಜೆವಾಲ ಆರೋಪ

ನೂತನ ಅಧಿಕಾರಿಗಳ ನೇಮಕ

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಗಳ ಮೇಲ್ವಿಚಾರಣೆ ಮಾಡಲು ಬಿಬಿಎಂಪಿ ಹೊರಗಿನಿಂದ ಮೂರು ಕ್ಷೇತ್ರಗಳಿಗೆ ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶಿವಾಜಿನಗರ ಎಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ (ಐಎಎಸ್), ಚಿಕ್ಕಪೇಟೆ ಎಸಿ ಡಾ. ಆರ್ ವಿಶಾಲ್ (ಐಎಎಸ್) ಮತ್ತು ಮಹದೇವಪುರ ಕ್ಷೇತ್ರಕ್ಕೆ ಅಜಯ್ ನಾಗಭೂಷಣ (ಐಎಎಸ್) ಅವರನ್ನು ನೇಮಕ ಮಾಡಿದೆ.

ಬಿಬಿಎಂಪಿ ಪ್ರದೇಶದ ವೀಕ್ಷಕರಾಗಿ ಬಿಬಿಎಂಪಿ ಕೇಂದ್ರಕ್ಕೆ ಉಜ್ವಲ್ ಘೋಷ್, ಬಿಬಿಎಂಪಿ ಉತ್ತರಕ್ಕೆ ಆರ್ ರಾಮಚಂದ್ರನ್, ಬಿಬಿಎಂಪಿ ದಕ್ಷಿಣಕ್ಕೆ ಪಿ ರಾಜೇಂದ್ರ ಚೋಳನ್ ಮತ್ತು ಬೆಂಗಳೂರು ನಗರಕ್ಕೆ ಡಾ ಎನ್ ಮಂಜುಳಾ ಅವರನ್ನು ವೀಕ್ಷಕರಾಗಿ ನೇಮಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app