- ಬಿಬಿಎಂಪಿ ಅಧಿಕೃತ ವೆಬ್ಸೈಟ್ನ ಸಿಟಿಜನ್ ಝೋನ್ನಲ್ಲಿ ಮಾಹಿತಿ ಲಭ್ಯ
- ಕಾಮಗಾರಿಯ ಖರ್ಚು ವೆಚ್ಚದ ಮಾಹಿತಿ ಪಡೆಯುವುದು ನಾಗರಿಕರ ಹಕ್ಕು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 'ವಲ್ಲಭ' ವೆಬ್ಸೈಟ್ನಲ್ಲಿ ಕಾಮಗಾರಿಗಳ ಖರ್ಚು ವೆಚ್ಚ ಕುರಿತು ಪಾರದರ್ಶಕತೆ ಇಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಯ 243 ವಾರ್ಡ್ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ವಿವರವನ್ನು ಪಾಲಿಕೆ ‘ವಲ್ಲಭ’ ಎಂಬ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ಆದರೆ, ಕಳೆದ ತಿಂಗಳಿನಿಂದ ವೆಬ್ಸೈಟ್ನಲ್ಲಿ ಬಿಬಿಎಂಪಿ ಕೈಗೊಂಡಿರುವ ವಾರ್ಡ್ವಾರು ಕಾಮಗಾರಿಗಳ ವಿವರಗಳನ್ನು ಸಾರ್ವಜನಿಕರು ವೀಕ್ಷಿಸದಂತೆ ನಿರ್ಬಂಧಿಸಲಾಗಿದೆ. ಪಾಲಿಕೆಯ ಈ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ವಲ್ಲಭ ವೆಬ್ಸೈಟ್ನಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾತ್ರ ಮಾಹಿತಿಯನ್ನು ವೀಕ್ಷಿಸುವಂತೆ ಮಾಡಲಾಗಿದೆ. ಇದನ್ನು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಪಾಲಿಕೆ ಯಾವುದೇ ಕಾಮಗಾರಿ ಕೈಗೆತ್ತಿಕೊಂಡರು ಅದಕ್ಕೆ ವ್ಯಯಿಸುವ ಹಣ, ಗುತ್ತಿಗೆ ಪಡೆಯುವವರ ಮಾಹಿತಿ, ಖರ್ಚಾದ ಹಣದ ಕುರಿತು ಮಾಹಿತಿ ಪಡೆಯುವ ಹಕ್ಕು ನಾಗರಿಕರಿಗಿದೆ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸಿಸಿಬಿ ಕಾರ್ಯಾಚರಣೆ: ಮಕ್ಕಳ ಪ್ರಜ್ಞೆ ತಪ್ಪಿಸಿ ಭಿಕ್ಷಾಟನೆಗೆ ಬಳಸುತ್ತಿದ್ದ 10 ಮಹಿಳೆಯರ ಸೆರೆ; 21 ಮಕ್ಕಳ ರಕ್ಷಣೆ
ವೆಬ್ಸೈಟ್ಅನ್ನು 2020ರಲ್ಲಿ ಪ್ರಾರಂಭಿಸಲಾಯಿತು ಮತ್ತು ಜನರು ಕೆಲಸದ ಪ್ರಗತಿ, ವೆಚ್ಚವನ್ನು ಡೌನ್ಲೋಡ್ ಮಾಡಲು ಮತ್ತು ಬಿಲ್ಗಳ ವಿವರಗಳು ಪಡೆಯಲು ಅವಕಾಶ ನೀಡಲಾಗಿತ್ತು. ನಾಗರಿಕರು ತಮ್ಮ ವಾರ್ಡ್ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಟ್ರ್ಯಾಕ್ ಮಾಡಲು ಇದು ಸಹಾಯಕವಾಗಿತ್ತು.
ನಗರದಲ್ಲಿ ಎಲ್ಲಿಯೇ ಸಮಸ್ಯೆ ಕಂಡುಬಂದರು ಸಹ ಹೋರಾಟಗಾರರು ಈ ವೆಬ್ ಮೂಲಕ ದೂರುಗಳನ್ನು ನೀಡಿ, ಹೋರಾಟ ಮಾಡುತ್ತಿದ್ದರು. ಆದರೆ, ಅಕ್ಟೋಬರ್ ತಿಂಗಳಿನಿಂದ ಈ ವೆಬ್ನಲ್ಲಿ ನಾಗರಿಕರು ಮಾಹಿತಿ ಪಡೆಯಲು ಸಾಧ್ಯವಾಗದಂತೆ ನಿರ್ಬಂಧಿಸಲಾಗಿದೆ.
ಈ ಕುರಿತು ಈ ದಿನ.ಕಾಮ್ ನೊಂದಿಗೆ ಮಾತನಾಡಿದ ಐಟಿ ವಿಭಾಗದ ಅಧಿಕಾರಿ ನಾಗೇಶ್, 'ವಲ್ಲಭ' ವೆಬ್ಸೈಟ್ ಇನ್ನು ಪ್ರಗತಿ ಹಂತದಲ್ಲಿದೆ. ಬಿಬಿಎಂಪಿ ಅಧಿಕಾರಿಗಳು ಮಾತ್ರ ಈ ವೆಬ್ಸೈಟ್ ಅನ್ನು ವೀಕ್ಷಿಸಬಹುದು. ನಾಗರಿಕರು ಪಾಲಿಕೆ ಕಾಮಗಾರಿ ಕುರಿತು ಮಾಹಿತಿ ಪಡೆಯಬೇಕೆಂದರೆ. ಬಿಬಿಎಂಪಿಯ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ 'ಸಿಟಿಜನ್ ಝೋನ್' ವಿಭಾಗದಲ್ಲಿ 'ವರ್ಕ್ ಬಿಲ್ಗಳು' ಎಂದು ಕ್ಲಿಕ್ ಮಾಡಿದರೆ ಬೇಕಾದ ಮಾಹಿತಿ ಪಡೆಯಬಹುದು ಎಂದು ಅವರು ಹೇಳಿದರು.