
- ಕನ್ನಡದಲ್ಲಿ ಮಾತನಾಡಲು ಕೇಳಿದ್ದ ದೂರುದಾರನ ಮೇಲೆ ಹಲ್ಲೆ ಮಾಡಿದ್ದ ಆರೋಪ
- 10 ತಿಂಗಳ ಬಳಿಕ ಪ್ರಕರಣಕ್ಕೆ ಹೊಸ ತಿರುವು; ಟಿಕಾಯತ್ ಸೇರಿ ಹಲವರ ವಿರುದ್ಧ ದೂರು
ಕಳೆದ 10 ತಿಂಗಳ ಹಿಂದೆ ಬೆಂಗಳೂರಿನ ಗಾಂಧಿ ಭವನದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಮೇಲೆ ನಡೆದ ಮಸಿ ದಾಳಿ ಸಂಬಂಧ ಪ್ರತಿದೂರು ದಾಖಲಾಗಿದೆ.
ಕಳೆದ ಮೇ.30ರಂದು ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಎರಚಿ ಹಲ್ಲೆ ಮಾಡಿದ್ದ ಪ್ರಕರಣ ಹಲವು ತಿಂಗಳ ನಂತರ ಹೊಸ ತಿರುವು ಪಡೆದುಕೊಂಡಿದ್ದು, ಇದೀಗ ಟಿಕಾಯತ್, ಅನುಸೂಯಮ್ಮ ಹಾಗೂ ಯುದ್ಧವೀರ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಎಚ್ ಆರ್ ಶಿವಕುಮಾರ್, ಘಟನೆ ನಡೆದ ವೇಳೆ ರಾಕೇಶ್ ಟಿಕಾಯತ್ ಸೇರಿದಂತೆ ಹಲವರು ನನ್ನ ಮೇಲೆ ಕುರ್ಚಿಯಿಂದ ಹಲ್ಲೆ ಮಾಡಿದರು ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಶಿವಕುಮಾರ್ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದು, ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಘಟನೆ ಹಿನ್ನೆಲೆ ಹಾಗೂ ಆರೋಪವೇನು?
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪದ ಬಗ್ಗೆ ಚರ್ಚಿಸಲು ಕಳೆದ 2022ರ ಮೇ.30ರಂದು ನಗರದ ಗಾಂಧಿ ಭವನದಲ್ಲಿ ʼರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ನೇತೃತ್ವದಲ್ಲಿ ʼಆತ್ಮಾವಲೋಕನ ಹಾಗೂ ಸ್ಪಷ್ಟೀಕರಣʼ ಸಭೆ ನಡೆದಿತ್ತು. ಈ ವೇಳೆ ರಾಕೇಶ್ ಟಿಕಾಯತ್ ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಅಂಗನವಾಡಿ ನೌಕರರ ಪ್ರತಿಭಟನೆ | ಮುಖಂಡರ ವಿರುದ್ಧ ಎಫ್‌ಐಆರ್
"ರೈತ ನಾಯಕಿ ಅನುಸೂಯಮ್ಮ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅದನ್ನು ಪ್ರಶ್ನಿಸಿ ದೂರುದಾರ ಶಿವಕುಮಾರ್, ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದರು. ಅದಾಗ್ಯೂ, ತೆಲುಗಿನಲ್ಲಿ ಭಾಷಣ ಮುಂದುವರಿಸಿದ್ದರಿಂದ ವೇದಿಕೆ ಏರಿದ ಶಿವಕುಮಾರ್, ಮೈಕ್ ಕಸಿದುಕೊಳ್ಳಲು ಯತ್ನಿಸಿದರು. ಈ ವೇಳೆ ಅವರನ್ನು ತಡೆದ ರಾಕೇಶ್ ಟಿಕಾಯತ್ ಹಾಗೂ ಇತರೆ ಆರೋಪಿಗಳು, ಕುರ್ಚಿಗಳಿಂದ ಹೊಡೆದು ಹಲ್ಲೆ ಮಾಡಿದ್ದರಿಂದ ಗಾಯಗಳಾಗಿದ್ದವು ಎಂದು ಆರೋಪಿಸಲಾಗಿದೆ."