ಬೆಂಗಳೂರಿನ ಐತಿಹಾಸಿಕ ಕರಗ ಶಕ್ತ್ಯುತ್ಸವಕ್ಕೆ ಕ್ಷಣಗಣನೆ

  • ಐತಿಹಾಸಿಕ ದ್ರೌಪದಮ್ಮ ಕರಗ ಮಹೋತ್ಸವಕ್ಕೆ ಕ್ಷಣಗಣನೆ
  • ಶನಿವಾರ ರಾತ್ರಿ 12.30ಕ್ಕೆ ಕರಗ ಮೆರವಣಿಗೆ ಆರಂಭ

ಕೊವೀಡ ಹಿನ್ನಲೆಯಲ್ಲಿ ಕಳೆದ ಎರಡು ವರ್ಷದಿಂದ ಸರಳವಾಗಿ ನಡೆದಿದ್ದ ಬೆಂಗಳೂರಿನ ಐತಿಹಾಸಿಕ ದ್ರೌಪದಮ್ಮ ಕರಗ ಮಹೋತ್ಸವಕ್ಕೆ  ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರಿನಲ್ಲಿ ಏ.16ರಂದು ರಾತ್ರಿ 12.30ಕ್ಕೆ  ಶ್ರೀ ಧರ್ಮರಾಯ ಸ್ವಾಮಿ ರಥೋತ್ಸವ ಹಾಗೂ ದ್ರೌಪದಮ್ಮ ದೇವಿಯ ಕರಗೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಏ.4ರಂದು ರಥೋತ್ಸವ ಮತ್ತು ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಪ್ರತಿದಿನ ದೇವಸ್ಥಾನದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆಯುತ್ತಿವೆ. ಈ ಉತ್ಸವದ ಕೇಂದ್ರ ಬಿಂದು ಕರಗ ಶಕ್ತ್ಯುತ್ಸವ.

ಕರಗ ಉತ್ಸವಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದ ಮೇಲೆ, ಧರ್ಮರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕರಗಕ್ಕೆ ವಿಜೃಂಭಣೆಯಿಂದ ತಯಾರಿ ನಡೆಸಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಎ.ಜ್ಞಾನೇಂದ್ರ ಅವರು ಕರಗವನ್ನು ಹೊರಲಿದ್ದಾರೆ. ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ಮಲ್ಲಿಗೆ ಹೂವಿನಿಂದ ಅಲಂಕರಿಸಲಾಗಿದೆ. ಕರಗ ಸಂಚರಿಸುವ ದಾರಿಯುದ್ದಕ್ಕೂ ದೀಪಾಲಂಕಾರ ಮಾಡಲಾಗಿದೆ.

ಇದನ್ನು ಓದಿದ್ದೀರಾ? ಭಾರತದಿಂದ ಗೋಧಿ ಖರೀದಿಗೆ ಈಜಿಪ್ಟ್‌ ಒಪ್ಪಿಗೆ | ಇನ್ನೂ ಹೆಚ್ಚು ರಾಷ್ಟ್ರಗಳಿಗೆ ರಫ್ತು ಸಾಧ್ಯತೆ

ಕರಗ ಸಂಚಾರ ಮಾರ್ಗ

ಹಲಸೂರು ಪೇಟೆ ಆಂಜನೇಯ ಸ್ವಾಮಿ ಮತ್ತು ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಸ್ವೀಕರಿಸಿ ನಂತರ ನಗರ್ತಪೇಟೆಯ ವೇಣುಗೋಪಾಲ ಸ್ವಾಮಿ, ಸಿದ್ದಣ್ಣಗಲ್ಲಿಯ ಭೈರದೇವರ ದೇವಸ್ಥಾನ, ಕಬ್ಬನ್‌ಪೇಟೆಯ ರಾಮಸೇನಾ ಮಂದಿರ, ಮಕ್ಕಳ ಬಸವನಗುಡಿ, ಗಾಣಿಗರ ಪೇಟೆಯ ಚನ್ನರಾಯಸ್ವಾಮಿ, ಹಾಗೂ ಚಾಮುಂಡೇಶ್ವರಿ ದೇವಾಲಯ ಮೂಲಕ ನಗರದ ನಾಲ್ಕು ದಿಕ್ಕುಗಳಲ್ಲೂ ಕರಗ ಸಂಚರಿಸಲಿದೆ.

ಕರಗ ಉತ್ಸವ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರಿಕ್ಷೇಯಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಈ ಬಾರಿಯ ಕರಗ ಮಹೋತ್ಸವಕ್ಕೆ 'ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್' ಅವರು ಭಾಗಿಯಾಗಲಿದ್ದಾರೆ ಎಂದು ಧರ್ಮರಾಯ ದೇವಸ್ಥಾನದ ಸಮಿತಿ ಮಾಹಿತಿ ನೀಡಿದೆ.

ಸಂಚಾರಕ್ಕೆ ಪರ್ಯಾಯ ದಾರಿ

ಕರಗ ಉತ್ಸವ ನಡೆಯುವ ಕೆಲವು ಪ್ರದೇಶಗಳಲ್ಲಿ ಶನಿವಾರ ಸಂಜೆ 4ರಿಂದ ಭಾನುವಾರ 8ರ ತನಕ ಸಂಚಾರ ನಿರ್ಬಂಧ ಹೇರಲಾಗಿದೆ.

ಸಿಟಿ ಮಾರುಕಟ್ಟೆ ಕಡೆಯಿಂದ ಬಂದು ಎಸ್‌ಜೆಪಿ ಜಂಕ್ಷನ್‌ನಲ್ಲಿ, ಪಿ.ಕೆ.ಲೇನ್ ಮೂಲಕ ಓಟಿಸಿ ರಸ್ತೆ ಮಾರ್ಗವಾಗಿ ಎನ್.ಆರ್.ರಸ್ತೆ ಹಾಗೂ ಸುಣ್ಣಕಲ್ಲು ಪೇಟೆಗೆ ಹೋಗಲು ಎಡ ತಿರುವು ಪಡೆಯುತ್ತಿದ್ದ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಇದಕ್ಕೆ ಪರ್ಯಾಯವಾಗಿ ಎಲ್ಲ ವಾಹನಗಳು ನೇರವಾಗಿ ಪುರಭವನ ವೃತ್ತಕ್ಕೆ ಹೋಗಿ ಎನ್.ಆರ್ ರಸ್ತೆಯ ಮೂಲಕ ಮುಂದೆ ಸಾಗಬೇಕು.

ಪಿ.ಕೆ.ಲೇನ್, ಓಟಿಸಿ, ನಗರ್ತಪೇಟೆ ರಸ್ತೆ, ಎಸ್.ಪಿ ರಸ್ತೆ ಮತ್ತು ಎಸ್.ಪಿ ರಸ್ತೆಯ ಅಡ್ಡ ರಸ್ತೆಗಳು ಹಾಗೂ ಸುಣ್ಣಕಲ್ಲು ಪೇಟೆ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧಿಸಲಾಗಿದೆ. ಅದರ ಬದಲಾಗಿ ಪುರಭವನ, ರವೀಂದ್ರ ಕಲಾಕ್ಷೇತ್ರ, ಮೈ ಸಕ್ಕರೆ ಕಟ್ಟಡ, ಎನ್.ಆರ್. ರಸ್ತೆ ಎಡಭಾಗ, ಕುಂಬಾರ ಗುಂಡಿ ರಸ್ತೆಯ ಎಡಭಾಗ, ಜೆ.ಸಿ. ರಸ್ತೆಯ ಎಡಭಾಗ, ಎಸ್‌ಜೆಪಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಂಟಿ ಪೊಲೀಸ್ ಆಯುಕ್ತ(ಸಂಚಾರ) ಬಿ.ಆರ್. ರವಿಕಾಂತೇಗೌಡ ಕೋರಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180