ಬೆಂಗಳೂರಿನಲ್ಲಿ ಕೋವಿಡ್‌ಗೆ ಮಹಿಳೆ ಬಲಿ: ಪ್ರಕರಣ ಏರಿಕೆ, 4ನೇ ಅಲೆಯ ಭೀತಿ

  • 24 ಗಂಟೆಗಳಲ್ಲಿ 291 ಮಂದಿಗೆ ಕೋವಿಡ್ ದೃಢ - ಓರ್ವ ಮಹಿಳೆ ಸಾವು
  • ನಿಯಂತ್ರಣ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ಸೂಚನೆ

ರಾಜ್ಯ ರಾಜಧಾನಿಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಬೆಂಗಳೂರು ನಗರದಲ್ಲಿ ಮಹಿಳೆಯೊಬ್ಬರು ಕೋವಿಡ್‌ಗೆ ಬಲಿಯಾಗಿದ್ದಾರೆ.

ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ದೃಢಪಡಿಸಿದ್ದಾರೆ.

Eedina App

ಈ ನಡುವೆ, ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾನುವಾರ 291 ಮಂದಿಗೆ ಸೋಂಕು ದೃಢಪಟ್ಟಿದೆ.

ಶನಿವಾರ 14,279 ಮಂದಿಯನ್ನು ಕೋವಿಡ್ ಪರೀಕ್ಷೆ ಒಳಪಡಿಸಲಾಗಿತ್ತು. ಆ ಪರೀಕ್ಷೆಗಳ ವರದಿ ಭಾನುವಾರ ಕೈಸೇರಿದೆ. ಆ ಪೈಕಿ 291 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಭಾನುವಾರ ಕೋವಿಡ್‌ ಸೋಂಕಿತರಾಗಿ ಚಿಕತ್ಸೆ ಪಡೆಯುತ್ತಿದ್ದ 142 ಮಂದಿ ಗುಣಮುಖರಾಗಿದ್ದು, ಪ್ರಸ್ತುತ ನಗರದಲ್ಲಿ 2,294 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.1.62ರಷ್ಟಿದೆ.

AV Eye Hospital ad

ನಗರದಲ್ಲಿ 2,294 ಪ್ರಕರಣಗಳು ಪತ್ತೆಯಾದರೂ ಆಸ್ಪತ್ರೆಗೆ ದಾಖಲಾಗುವವರು ತುಂಬಾ ವಿರಳವಾಗಿದೆ. ಕೇವಲ 21 ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ನಾಲ್ವರು ತುರ್ತು ನಿಗಾ ಘಟಕದಲ್ಲಿ ಇದ್ದಾರೆ. ಹೆಚ್ಚಿನ ಸೋಂಕಿತರು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುತ್ತಿರುವುದರಿಂದ ಕೋವಿಡ್ ಸಮುದಾಯಕ್ಕೆ ಬೇಗನೆ ಹರಡುವ ಸಾಧ್ಯತೆಗಳೇ ಹೆಚ್ಚು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಉಡುಪಿ | ರಸ್ತೆಗೆ 'ನಾಥೂರಾಮ್ ಗೋಡ್ಸೆ' ಹೆಸರು: ವಿರೋಧದ ಬಳಿಕ ನಾಮಫಲಕ ತೆರವು

ಕಳೆದ ನಾಲ್ಕು ದಿನಗಳಿಂದ ಸತತವಾಗಿ 200ರ ಗಡಿ ದಾಟಿರುವ ಕೋವಿಡ್ ಪಾಸಿಟಿವ್ ಸಂಖ್ಯೆ ಭಾನುವಾರ 300 ಸಮೀಪಿಸಿತ್ತು. ಜೊತೆಗೆ ಓರ್ವ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಪ್ರಾರಂಭವಾಗುತ್ತಿರುವ ಬಗ್ಗೆ ಜನರಲ್ಲಿ ಆತಂಕ ಉಂಟಾಗಿದೆ.

ಕೋವಿಡ್ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಶನಿವಾರ 17,290 ಮಂದಿ ಮತ್ತು ಭಾನುವಾರ 24,543 ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ ರೂಂ ಪ್ರಕಟಣೆ ತಿಳಿಸಿದೆ.

ಕೋವಿಡ್‌ ಅಂಕಿಅಂಶ

ದಿನಾಂಕ ಹೊಸ ಪ್ರಕರಣ ಗುಣಮುಖ ಮರಣ ಸಕ್ರಿಯ ಪ್ರಕರಣ
ಜೂನ್ 1 158 200 0 1895
ಜೂನ್ 2 276 173 0 2,091
ಜೂನ್ 3 243  227 0 2,107
ಜೂನ್ 4 210 171 0 2,146
ಜೂನ್ 5 291  142 1 2,290

ಬೆಂಗಳೂರಿನಲ್ಲಿ ಹೆಚ್ಚು ಸೋಂಕಿತರು 
ದೇಶದಲ್ಲಿ ವರದಿಯಾಗುತ್ತಿರುವ ಕೊರೊನಾ ಸೋಂಕಿನ ಅಂಕಿಅಂಶಗಳನ್ನು ವಿಶ್ಲೇಷಿಸಿದರೆ ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಮುಂಬೈ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕು ದೃಢಪಡುತ್ತಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 301 ಮಂದಿಗೆ ಸೋಂಕು ಪತ್ತೆಯಾಗಿತ್ತು. ಈ ಪೈಕಿ 291 ಪ್ರಕರಣಗಳು ಬೆಂಗಳೂರಿನಲ್ಲಿಯೇ ವರದಿಯಾಗಿವೆ.

ದೇಶದ ಪ್ರಮುಖ ನಗರಗಳಾದ ಮುಂಬೈನಲ್ಲಿ 4,294, ಬೆಂಗಳೂರು 2,294, ನವದೆಹಲಿ 1,467, ಚೆನೈ 431 ಹಾಗೂ ಕೊಲ್ಕತ್ತಾದಲ್ಲಿ 272 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನ ಏರಿಕೆ ಆಗುತ್ತಿರುವುದರಿಂದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸೋಂಕು ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ಅವರ ಪತ್ರದ ಬೆನ್ನಲ್ಲೇ ಮಹಿಳೆಯೊಬ್ಬರು ಕೋವಿಡ್‌ಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app