ಕೋವಿಡ್ ಏರಿಕೆ| ರಾಜ್ಯದಲ್ಲಿ 833 ಸೋಂಕು ಪ್ರಕರಣ ಪತ್ತೆ, ಬೆಂಗಳೂರಿನಲ್ಲಿ ಇಬ್ಬರು ಮೃತ

  • ರಾಜ್ಯದಲ್ಲಿ ಹೊಸದಾಗಿ ಕೊವೀಡ್‌ ಸೋಂಕಿತ ಪ್ರಕರಣಗಳ ಸಂಖ್ಯೆ 4,371ಕ್ಕೆ ಏರಿಕೆ
  • ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿನಿಂದ ಒಂದು ವಾರದಲ್ಲಿ ಇಬ್ಬರು ಮೃತ

ಕಳೆದ ಒಂದು ವಾರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯದಲ್ಲಿ ಹೊಸದಾಗಿ 833 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಬೆಂಗಳೂರಿನಲ್ಲಿಯೇ 791 ಕೊವೀಡ್‌ ಸೋಂಕಿತ ಪ್ರಕರಣ ದಾಖಲಾಗಿವೆ.  ರಾಜ್ಯದಲ್ಲಿ ಸದ್ಯ ಸಕ್ರೀಯ ಪ್ರಕರಣಗಳ ಸಂಖ್ಯೆ 4 ಸಾವಿರ (4,371) ಗಡಿ ದಾಟಿದೆ. 

ಬೆಂಗಳೂರಿನಲ್ಲಿ ಈಗ 4,199 ಪ್ರಕರಣಗಳು ಸಕ್ರೀಯವಾಗಿದ್ದು, ಒಟ್ಟು 23,990 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ.3.47ರಷ್ಟು ವರದಿಯಾಗಿದೆ.

ಕೋವಿಡ್‌ನಿಂದ ಸಾವು

ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿನಿಂದ ಒಂದು ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿಯ 35 ವರ್ಷದ ಮಹಿಳೆ ಮೃತಪಟ್ಟಿದ್ದು ಅವರಿಗೆ ಕ್ಷಯ ರೋಗವಿತ್ತು ಎನ್ನಲಾಗಿದೆ.

ರಾಜ್ಯದ 11 ಜಿಲ್ಲೆಗಳಲ್ಲಿ ಹೊಸದಾಗಿ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಮೈಸೂರಿನಲ್ಲಿ 12 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಉಳಿದ ಜಿಲ್ಲೆಗಳಲ್ಲಿ ತಲಾ ಒಂದರಂತೆ ಹೊಸ ಪ್ರಕರಣ ದಾಖಲಾಗಿದೆ. ಯಾದಗಿರಿ, ವಿಜಯಪುರ ಸೇರಿದಂತೆ 8 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳಿಲ್ಲ.

ರಾಜ್ಯದಲ್ಲಿ ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 39.58 ಲಕ್ಷ ದಾಟಿದೆ. 39.14 ಲಕ್ಷಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಪ್ರಕಾರ ಕೋವಿಡ್‌ಗೆ ಈವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ 40,068ಕ್ಕೆ ಏರಿಕೆಯಾಗಿದೆ. 

ಕೋವಿಡ್‌ ಹೊಸ ತಳಿ ಪತ್ತೆಗೆ ಪರೀಕ್ಷೆ

ಕರೋನಾ ಹೊಸ ತಳಿ ಪತ್ತೆಗಾಗಿ ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟವರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ (ಜೀನೊಮಿಕ್ ಸೀಕ್ವೆನ್ಸಿಂಗ್) ಪರೀಕ್ಷೆಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಸುದ್ದಿ ಓದಿದ್ದೀರಾ? ಜೂನ್ 20ರಂದು ಮೆಮು ರೈಲು ಪುನರಾರಂಭ: ನೈರುತ್ಯ ರೈಲ್ವೆ ಇಲಾಖೆ

"ಕೋವಿಡ್ ಮೂರನೇ ಅಲೆಯಲ್ಲಿ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಂದ ಕೊವೀಡ್ ಹರಡದಂತೆ ತಡೆಯಲು ಸಾಧ್ಯವಾಯಿತು. ಈಗ ನಗರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವೈರಾಣುವಿನ ರೂಪಾಂತರಿ ಪತ್ತೆ ಹಚ್ಚಿ ಅದರ ಸ್ವರೂಪ ಮತ್ತು ಪರಿಣಾಮದ ಬಗ್ಗೆ ಅಧ್ಯಯನ ನಡೆಸಿ, ನಿಗಾ ಇಡಬೇಕಾಗುತ್ತದೆ" ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ ರಂದೀಪ್ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದಾರೆ.

"ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಕೋವಿಡ್ ನಾಲ್ಕನೇ ತಳಿ ಪತ್ತೆಗಾಗಿ ವಿದೇಶಗಳಿಂದ ಬರುವ ಶೇ. 2ರಷ್ಟು ಪ್ರಯಾಣಿಕರನ್ನು ಸಾಮೂಹಿಕವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಬೇಕು. ವರದಿಯಲ್ಲಿ ಕೋವಿಡ್‌ ಸೋಂಕು ಇರುವುದು ದೃಢವಾದರೇ, ಆ ಮಾದರಿಯನ್ನು ಜೀನೊಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಬೇಕು," ಎಂದು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app