ಬೆಂಗಳೂರು | ಯಶವಂತಪುರದಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚು ರೈಲುಗಳನ್ನು ಒದಗಿಸಲು ಆಗ್ರಹ

memu train
  •  ಸಂಚಾರ ದಟ್ಟಣೆಯಿಂದಾಗಿ ಯಲಹಂಕ ತಲುಪುವುದು ಕಷ್ಟ
  • ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗುವ ಮಾರ್ಗದಲ್ಲಿ ರೈಲು ಸಂಚರಿಸಲಿ

ಜುಲೈ 29 ರಂದು ನೈರುತ್ಯ ರೈಲ್ವೆ ಇಲಾಖೆಯು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜನ ಸಂಚಾರ ಸುಲಭಗೊಳಿಸಲು ಏಳು ಮೆಮು ರೈಲುಗಳನ್ನು ಪರಿಚಯಿಸಿತ್ತು, ಕಾಲಕ್ರಮೇಣ ಪ್ರಯಾಣಿಕರ ಸಂಚಾರ ಕಡಿಮೆಯಾದ ಕಾರಣ ಮೆಮು ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಆ ಮಾರ್ಗದಲ್ಲಿ ಸಂಚಾರ ಪುನರಾರಂಭಗೊಂಡಿದ್ದು, ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ. 

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಲು ಏಳು ಮೆಮು ರೈಲುಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಏಳು ರೈಲುಗಳ ಪೈಕಿ ಕೇವಲ ಒಂದು ರೈಲು ಮಾತ್ರ ಯಶವಂತಪುರ ರೈಲು ನಿಲ್ದಾಣದ ಮೂಲಕ ಹೊರಡುತ್ತದೆ ಎಂದು ಕೆಲವು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕೋಲಾರಕ್ಕೆ ಹೋಗುವ ಡೆಮು ಎಕ್ಸ್‌ಪ್ರೆಸ್‌ ರೈಲು ಹೊರತಾಗಿ ಉಳಿದೆಲ್ಲ ರೈಲುಗಳು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ದೊಡ್ಡಜಾಲ, ಯಲಹಂಕ ಮಾರ್ಗದಲ್ಲಿ ಸಂಚರಿಸಲಿವೆ.

ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಎರಡು ರೈಲುಗಳು ಹೊರಡಲಿದ್ದು, ಅವುಗಳು ಬೈಯಪ್ಪನಹಳ್ಳಿ ಮಾರ್ಗದಲ್ಲೇ ಸಂಚರಿಸುತ್ತವೆ. ಕೆಎಸ್ಆರ್ ರೈಲು ನಿಲ್ದಾಣದಿಂದ ಹೊರಡುವ ಇನ್ನೆರಡು ರೈಲುಗಳೂ ಕಂಟೋನ್ಮೆಂಟ್–ಬೈಯಪ್ಪನಳ್ಳಿ ಮಾರ್ಗದಲ್ಲೇ ಸಂಚರಿಸುತ್ತವೆ. 

ಹೀಗಾಗಿ 'ಸಿಟಿಜನ್ ಫಾರ್ ಸಿಟಿಜನ್' ಸಂಘಟನೆ, ಪ್ರಯಾಣಿಕರ ಸಂಖ್ಯೆ ಹೆಚ್ಚಿಸಲು ನೈಋತ್ಯ ರೈಲ್ವೆ ಇಲಾಖೆಗೆ ಹಲವು ಸಲಹೆ ಸೂಚನೆ ನೀಡಿದೆ.

"ಏಳು ಹೊಸ ಮೆಮು ರೈಲುಗಳು ಬಂದಿರುವುದು ಸಂತಸದ ವಿಚಾರ ಆದರೆ, ಅವುಗಳು ಪ್ರಯಾಣಿಕರಿಗೆ ಇನ್ನಷ್ಟು ಪ್ರಯೋಜನಕಾರಿ ಆಗಲು ಯಶವಂತಪುರ ಮಾರ್ಗದಲ್ಲಿ ಸಂಚಾರ ಮಾಡುವಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು" ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ವ್ಯವಸ್ಥಾಪಕರಿಗೆ ‘ಸಿಟಿಜನ್ ಫಾರ್ ಸಿಟಿಜನ್’ ಸಂಘಟನೆ ಮನವಿ ಸಲ್ಲಿಸಿದೆ.

ಯಶವಂತಪುರ ರೈಲು ನಿಲ್ದಾನದ ಸುತ್ತಮುತ್ತಲಿನ ಪ್ರದೇಶವು ಕೈಗಾರಿಕಾ ಪ್ರದೇಶವಾದ ಕಾರಣ, ಅಲ್ಲಿನ ಜನ ಊರುಗಳಿಗೆ ತೆರಳುವುದು ಅಥವಾ ಕೆಲಸ ಮತ್ತಿತರ ಕಾರಣಗಳಿಗೆ ಓಡಾಡುವುದು ಹೆಚ್ಚು. ಹೀಗಾಗಿ ಈ ಸ್ಥಳದಿಂದ ರೈಲು ಸಂಚಾರ ಅಧಿಕಗೊಂಡರೆ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು ಎಂದು ‘ಸಿಟಿಜನ್ ಫಾರ್ ಸಿಟಿಜನ್’ನ ಕಾರ್ಯಕರ್ತ ರಾಜ್‌ಕುಮಾರ್ ದುಗರ್ ಸಲಹೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಹತ್ತು ವರ್ಷಗಳ ಬಳಿಕ ತುಂಬುವ ಹಂತಕ್ಕೆ ಬಂದ ತಿಪ್ಪನಗೊಂಡನಹಳ್ಳಿ ಜಲಾಶಯ

ಯಲಹಂಕದಿಂದ ಸಂಚಾರ ಆರಂಭಿಸಲು ಉದ್ದೇಶಿಸಿರುವ ಎರಡು ರೈಲುಗಳ ಸಂಚಾರವನ್ನು ಕೆಎಸ್‌ಆರ್ ರೈಲು ನಿಲ್ದಾಣದಿಂದ ಆರಂಭವಾಗುವಂತೆ ನೋಡಿಕೊಳ್ಳಬೇಕು. ಅಲ್ಲದೇ ಅವುಗಳು ಯಶವಂತಪುರ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಬೇಕು. ಇದರಿಂದ ಆ ಭಾಗದ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ದುಗರ್ ಹೇಳಿದ್ದಾರೆ.

"ಕೆಎಸ್ಆರ್ ನಿಲ್ದಾಣದಿಂದ ಪ್ರಯಾಣ ಆರಂಭಿಸುವ ಬೆಂಗಳೂರು ಮತ್ತು ಕೋಲಾರ ನಡುವಿನ ಡೆಮು ಎಕ್ಸ್‌ಪ್ರೆಸ್ ರೈಲು ಸೇರಿ, ಎಲ್ಲ ರೈಲುಗಳೂ ವಿಮಾನ ನಿಲ್ದಾಣದ ಬಳಿ ಇರುವ ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು" ಎಂದು 'ಸಿಟಿಜನ್ ಫಾರ್ ಸಿಟಿಜನ್' ಸಂಘಟನೆಯು ಮನವಿ ಮಾಡಿಕೊಂಡಿದೆ.

"ಯಶವಂತಪುರಕ್ಕೆ ಈಗಾಗಲೇ ಮೆಟ್ರೋ ಸಂಪರ್ಕ ಕಲ್ಪಿಸಲಾಗಿದ್ದು , ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ರೈಲು ಕಲ್ಪಿಸಿದರೆ ಪ್ರಯಾಣಿಕರಿಗೆ ಪ್ರಯೋಜನವಾಗುತ್ತದೆ ಆದರೆ, ಇದನ್ನು ಹೊರತುಪಡಿಸಿ ಯಲಹಂಕದಿಂದ ರೈಲುಗಳು ಸಂಚರಿಸಿದರೆ ಯಾವುದೇ ಲಾಭವಿಲ್ಲ" ಎಂದಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್