ಬೆಂಗಳೂರು | 'ನಮ್ಮ ಕ್ಲಿನಿಕ್' ಲೋಗೋ ವಿನ್ಯಾಸಗೊಳಿಸಿ, ಬಹುಮಾನ ಗೆಲ್ಲಿ

  • ರಾಜ್ಯದ ಒಟ್ಟು 438 ಪ್ರದೇಶಗಳಲ್ಲಿ 'ನಮ್ಮ ಕ್ಲಿನಿಕ್' ಸ್ಥಾಪನೆ
  • ಆಗಸ್ಟ್ 5ರಿಂದ 15ರ ಒಳಗೆ ಲೋಗೊ ವಿನ್ಯಾಸ ಕಳುಹಿಸಬೇಕು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ನಮ್ಮ ಕ್ಲಿನಿಕ್' ಯೋಜನೆ ಆರಂಭವಾಗಿದ್ದು, ಲೋಗೊ ವಿನ್ಯಾಸಗೊಳಿಸಲು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಆಯ್ಕೆಯಾದ ಲೋಗೊ ವಿನ್ಯಾಸಕ್ಕೆ ಬಹುಮಾನ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.

"ಸರ್ಕಾರದ ಮತ್ತು ಆರೋಗ್ಯ ಇಲಾಖೆಯ ಉದ್ದೇಶವನ್ನು ಬಿಂಬಿಸುವಂತೆ 'ನಮ್ಮ ಕ್ಲಿನಿಕ್‌'ಗೆ ಸಾರ್ವಜನಿಕರು ಆಕರ್ಷಕ ಲೋಗೋ ವಿನ್ಯಾಸ ಮಾಡಿ, ಆಗಸ್ಟ್ 5ರಿಂದ 15ರ ಒಳಗೆ logo4nammaclinic@gmail.comಗೆ ಕಳುಹಿಸಬೇಕು. ಬಹುಮಾನಿತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಂದ ವಿಶೇಷ ಗೌರವ ಸಿಗಲಿದೆ" ಎಂದು ಅವರು ಹೇಳಿದರು.

ಬೆಂಗಳೂರಿನ 243 ವಾರ್ಡ್‌ ಸೇರಿದಂತೆ ರಾಜ್ಯದ ಒಟ್ಟು 438 ಪ್ರದೇಶಗಳಲ್ಲಿ 'ನಮ್ಮ ಕ್ಲಿನಿಕ್' ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ದೋಷಪೂರಿತ ರಾಷ್ಟ್ರಧ್ವಜ ಮಾರಾಟ ಮಾಡಬೇಡಿ: ವಿಶೇಷ ಆಯುಕ್ತ ರಂಗಪ್ಪ

ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ನಮ್ಮ  ಕ್ಲಿನಿಕ್ ಆರಂಭವಾಗಲಿವೆ. ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಮಲ್ಲೇಶ್ವರ ಮತ್ತು ಪದ್ಮನಾಭನಗರ ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಿಕ್’ ಆರಂಭವಾಗಿದೆ.

“ಬಿಬಿಎಂಪಿ ವ್ಯಾಪ್ತಿಯ ಎರಡು ವಾರ್ಡ್‌ಗಳಲ್ಲಿ 'ನಮ್ಮ ಕ್ಲಿನಿಕ್‌' ಅನ್ನು ಜುಲೈ 28ರಿಂದ ಆರಂಭಿಸಲಾಗಿದೆ. ಉಳಿದ ವಾರ್ಡ್‌ಗಳಲ್ಲಿ ಇನ್ನೆರಡು ತಿಂಗಳಲ್ಲಿ ಕ್ಲಿನಿಕ್‌ ಆರಂಭಿಸಲಾಗುವುದು" ಎಂದು ಈ ಹಿಂದೆ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ ತ್ರಿಲೋಕಚಂದ್ರ ಹೇಳಿದ್ದರು.

'ನಮ್ಮ ಕ್ಲಿನಿಕ್‌'ನ ಸೌಲಭ್ಯಗಳು

ನಗರದಲ್ಲಿ ನಮ್ಮ ಕ್ಲಿನಿಕ್‌ಗಳು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30ವರೆಗೆ ಕಾರ್ಯನಿರ್ವಹಿಸುತ್ತವೆ. ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಒಬ್ಬ ನರ್ಸ್, ಒಬ್ಬರು ಲ್ಯಾಬ್ ಟೆಕ್ನಿಷಿಯನ್‌ ಹಾಗೂ ಒಬ್ಬ ಡಿ ಗ್ರೂಪ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.

'ನಮ್ಮ ಕ್ಲಿನಿಕ್‌'ಗೆ ತಪಾಸಣೆಗೆ ಬರುವ ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್