ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: ಆಸ್ತಿ ನಷ್ಟ ಕುರಿತು 2 ತಿಂಗಳಲ್ಲಿ ವರದಿ ಸಲ್ಲಿಸುವ ಸಾಧ್ಯತೆ

  • ಡಿ ಜೆ ಹಳ್ಳಿ, ಕೆ ಜಿ ಹಳ್ಳಿಗಳ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಗಳು
  • ನ್ಯಾ ಎಚ್.ಎಸ್ ಕೆಂಪಣ್ಣ ನೇತೃತ್ವದ ತಂಡದಿಂದ ತನಿಖೆ

ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಗಲಭೆಗಳು ನಡೆದು ಎರಡು ವರ್ಷಗಳು ಕಳೆದಿವೆ. ಘಟನೆ ಕುರಿತ ತನಿಖಾ ವರದಿಯನ್ನು ಕ್ಲೈಮ್ ಕಮಿಷನ್ ನ್ಯಾಯಾಲಯಕ್ಕೆ ಸಲ್ಲಿಸಲು ಮುಂದಾಗಿದೆ. ಇದರಿಂದಾಗಿ ಘಟನೆಯಲ್ಲಿ ಆಸ್ತಿ, ಬೆಲೆಬಾಳುವ ವಸ್ತುಗಳು ಮತ್ತು ವಾಹನಗಳನ್ನು ಕಳೆದುಕೊಂಡವರಲ್ಲಿ ತಮಗಾದ ನಷ್ಟಕ್ಕೆ ಪರಿಹಾರ ಪಡೆಯಬಹುದೆಂಬ ಭರವಸೆ ಚಿಗುರಿದೆ.

ದೇವರ ಜೀವನಹಳ್ಳಿ (ಡಿ ಜೆ ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ (ಕೆ ಜಿ ಹಳ್ಳಿ) ವ್ಯಾಪ್ತಿಯಲ್ಲಿ ಉದ್ರಿಕ್ತ ಗುಂಪೊಂದು 2020ರ ಆಗಸ್ಟ್ 11ರಂದು ಗಲಾಟೆ ನಡೆಸಿತ್ತು. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಲಾಗಿತ್ತು. ಜೊತೆಗೆ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಪೂರ್ವ ಬೆಂಗಳೂರಿನಲ್ಲಿ ಅನೇಕ ಕಟ್ಟಡಗಳಿಗೆ ಹಾನಿ ಮಾಡಲಾಗಿತ್ತು.

ಘಟನೆಯ ಕುರಿತು ತನಿಖೆ ನಡೆಸಿ ನಷ್ಟದ ಅಂದಾಜಿನ ಬಗ್ಗೆ ವರದಿ ಸಲ್ಲಿಸಲು ಆಗಸ್ಟ್ 28, 2020ರಂದು ಕರ್ನಾಟಕ ಹೈಕೋರ್ಟ್ ಹಕ್ಕು ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದಲ್ಲಿ ಕ್ಲೈಮ್ ಕಮಿಷನ್ ಅನ್ನು ನೇಮಿಸಿತ್ತು. ಆಯೋಗವು ಗಲಭೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಕಾರ್ಯವನ್ನು ಪೂರ್ಣಗೊಳಿಸಿದೆ. 116 ಜನರನ್ನು ತನಿಖೆಗೆ ಒಳಪಡಿಸಿದೆ ಮತ್ತು ಮುಂದಿನ ಎರಡು ತಿಂಗಳೊಳಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ಈ ಸುದ್ದಿ ಓದಿದ್ದೀರಾ? ಅಮೃತ ಮಹೋತ್ಸವ| ಬೆಂಗಳೂರಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು: ತುಷಾರ್ ಗಿರಿನಾಥ್

 

“ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯಲು ಸಾಕ್ಷಿಗಳ ವಿಚಾರಣೆಯು ನೆರವು ನೀಡಿದೆ. ಘಟನೆಯಿಂದ ನಷ್ಟ ಅನುಭವಿಸಿದ್ದೇವೆಂದು 90 ಮಂದಿ ಆರೋಪಿಸಿದ್ದು, ಅವರೆಲ್ಲರ ವಾಹನಗಳು ಹಾಗೂ ಇತರ ಆಸ್ತಿಗಳ ಕುರಿತು ಮೋಟಾರು ವಾಹನಗಳ ಇನ್ಸ್‌ಫೆಕ್ಟರ್‌ಗಳು, ಆಸ್ತಿಗಳ ಹಾನಿ ಪ್ರಮಾಣವನ್ನು ನಿರ್ಧರಿಸುವ ಆಸ್ತಿ ಮೌಲ್ಯಮಾಪಕರು ಮತ್ತು ಪ್ರಕರಣಗಳ ತನಿಖೆ ನಡೆಸಿದ 16 ಪೊಲೀಸ್ ಅಧಿಕಾರಿಗಳ ನೆರವು ಪಡೆದುಕೊಂಡಿದ್ದೇವೆ. ಅವರ ಹೇಳಿಕೆಗಳನ್ನೂ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದೇವೆ” ಎಂದು ನ್ಯಾಯಮೂರ್ತಿ ಎಚ್ ಎಸ್ ಕೆಂಪಣ್ಣ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

“102 ವಾಹನಗಳು ಮತ್ತು 17 ಇತರ ಆಸ್ತಿಗಳಿಗೆ ಪರಿಹಾರ ಕೋರಿ ಆಯೋಗಕ್ಕೆ 90 ಅರ್ಜಿಗಳು ಬಂದಿವೆ. ಆ ಎಲ್ಲ ಅರ್ಜಿಗಳ ಪ್ರಕಾರ ಒಟ್ಟು 4.49ಕೋಟಿ ರೂ. ಮೌಲ್ಯದ ಆಸ್ತಿಗೆ ಹಾನಿಯಾಗಿದೆ. ಆದಾಗ್ಯೂ, ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿರುವಷ್ಟು ಮೊತ್ತದ ಪರಿಹಾರ ಪಡೆಯಲು ಸಾಧ್ಯವಿಲ್ಲ. ಅರ್ಜಿದಾರರು ಪಡೆಯಬೇಕಾದ ಪರಿಹಾರದ ಮೊತ್ತವನ್ನು ಮೌಲ್ಯಮಾಪಕರ ವರದಿ ಮತ್ತು ತನಿಖೆಯ ಸಮಯದಲ್ಲಿ ಕಮಿಷನ್ ಪಡೆದ ದಾಖಲೆಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Image

“ಅನೇಕ ಜನರು ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಅವರಲ್ಲಿ ಹಲವರು ರೆಫ್ರಿಜರೇಟರ್‌ಗಳು, ಟೆಲಿವಿಷನ್ ಸೆಟ್‌ಗಳು, ವಿದ್ಯುತ್ ಉಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆಯೆಂದು ಹೇಳಿದ್ದಾರೆ. ಅವರ ಎಲ್ಲ ಆರೋಪಗಳನ್ನು ಪರಿಶೀಲಿಸುವುದು ಸವಾಲಿನ ಕೆಲಸವಾಗಿತ್ತು” ಎಂದು ಕೆಂಪಣ್ಣ ವಿವರಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್