ಗುರುದ್ವಾರದಿಂದ ರಾಜಕಾಲುವೆ ಒತ್ತುವರಿ: ಬಿಎಂಟಿಎಫ್ ಸಹಕಾರದಲ್ಲಿ ತೆರವು ಕಾರ್ಯಾಚರಣೆ

  • ಮೀಸಲು ಪ್ರದೇಶದಲ್ಲಿ ‘ಗುರುದ್ವಾರ ಗುರು ಸಿಂಗ್ ಸಭಾ’ ಬಹುಮಹಡಿ ಕಟ್ಟಡ
  • ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿರುವ ಗುರುದ್ವಾರ 

ಹಲಸೂರು ಕೆರೆಯ ಮೀಸಲು ಪ್ರದೇಶದಲ್ಲಿ ಗುರುದ್ವಾರ ಆಡಳಿತ ಮಂಡಳಿಯು ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ರಾಜಕಾಲುವೆಯನ್ನೂ ಒತ್ತುವರಿ ಮಾಡಿದೆ. ಬೆಂಗಳೂರು ಮಹಾನಗರ ಕಾರ್ಯಪಡೆಯ (ಬಿಎಂಟಿಎಫ್) ಸಹಕಾರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.

ಪರಿಸರ ನಿಯಮಗಳನ್ನು ಉಲ್ಲಂಘಿಸಿ ಗುರುದ್ವಾರದವರು ಹಲಸೂರು ಕೆರೆಯ ನಿಗದಿತ ಮೀಸಲು ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಹಲಸೂರಿನ ಶಾಂತಿ ಅಪಾರ್ಟ್ಮೆಂಟ್ ಸಮುಚ್ಚಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ವಿವೇಕ್ ಎಂಬುವರು ಆರೋಪಿಸಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠಕ್ಕೆ ದೂರು ನೀಡಿದ್ದಾರೆ. 

Eedina App

ಪ್ರಕರಣ ದಾಖಲಿಸಿಕೊಂಡಿದ್ದ ಎನ್‌ಜಿಟಿ, "ಒತ್ತುವರಿ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಂಟಿ ಸಮಿತಿ ಪರಿಶೀಲನೆ ನಡೆಸಬೇಕು. ಪರಿಶೀಲನಾ ವರದಿಯನ್ನು ಎನ್‌ಜಿಟಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಬೇಕು" ಎಂದು ಸೂಚನೆ ನೀಡಿತ್ತು. 

“10 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ‘ಗುರುದ್ವಾರ ಗುರು ಸಿಂಗ್ ಸಭಾ’ ಕಟ್ಟಡವನ್ನು ಗುರುದ್ವಾರದ ಆಡಳಿತ ಮಂಡಳಿ ನಿರ್ಮಾಣ ಮಾಡುತ್ತಿದೆ. ಅಲ್ಲದೆ, ಇಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನೂ ನಿರ್ಮಾಣ ಮಾಡುತ್ತಿದೆ. ಕಾಮಗಾರಿಗಾಗಿ ರಾಜಕಾಲುವೆ ಒತ್ತುವರಿ ಮಾಡಲಾಗಿದೆ. ಕಾಮಗಾರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೂ ಪಡೆದುಕೊಂಡಿಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಜೂನ್‌ ತಿಂಗಳಿನಲ್ಲಿಯೇ ಗುರುದ್ವಾರಕ್ಕೆ ನೋಟಿಸ್ ನೀಡಿತ್ತು. ಆದರೆ, ನೋಟೀಸ್‌ಗೆ ಈವರೆಗೆ ಉತ್ತರವೂ ಬಂದಿಲ್ಲ” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯಅಧಿಕಾರಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

AV Eye Hospital ad

"ಗುರುದ್ವಾರವು ರಾಜಕಾಲುವೆ ಒತ್ತುವರಿ ಮಾಡಿರುವ ಬಗ್ಗೆ 2021ರ ಫೆಬ್ರುವರಿಯಲ್ಲಿಯೇ ಬಿಬಿಎಂಪಿ ಗಮನಕ್ಕೆ ಬಂದಿತ್ತು. ಆ ಬಗ್ಗೆ ಬಿಬಿಎಂಪಿ ಪೂರ್ವ ವಿಭಾಗದ ಮುಖ್ಯ ಎಂಜಿನಿಯರ್ ಜಂಟಿ ಆಯುಕ್ತರಿಗೆ ಪತ್ರ ಬರೆದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ, ಈ ವರ್ಷದ ಜೂನ್‌ನಲ್ಲಿ ರಾಜಕಾಲುವೆ ಗಡಿ ಗುರುತು ಮಾಡಲು ಸರ್ವೆ ನಡೆಸಲು, ಸರ್ವೇಯರ್‌ಗಳನ್ನು ನೀಡುವಂತೆ ಅವರು ಜಿಲ್ಲಾಧಿಕಾರಿಗೂ ಪತ್ರ ಬರೆದಿದ್ದರು. ಆದರೆ, ಜಿಲ್ಲಾಡಳಿತ ಸರ್ವೇಯರ್‌ಗಳನ್ನು ನೀಡಿರಲಿಲ್ಲ. ಹಾಗಾಗಿ, ಮತ್ತೆ ಪತ್ರ ಬರೆದು ಜ್ಞಾಪಿಸಲಾಯಿತು. ಸರ್ವೆಯರ್‌ಗಳು ಗಡಿ ಗುರುತು ಮಾಡಿದ ನಂತರ ಒತ್ತುವರಿ ತೆರವು ಮಾಡಲಾಗುತ್ತದೆ" ಎಂದು ವರದಿಯಲ್ಲಿ ಬಿಬಿಎಂಪಿ ಉಲ್ಲೇಖಿಸಿತ್ತು. 

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೆಟ್ರೋ ನಿಲ್ದಾಣದಲ್ಲಿ ನೂತನ ಪುಸ್ತಕ ಮಳಿಗೆ ಆರಂಭ

ಗುರುದ್ವಾರ ಕಟ್ಟಡವು ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿಲ್ಲ. ಈ ಕಟ್ಟಡವೂ ಹಲಸೂರು ಕೆರೆಯ ಕೆಳಭಾಗದಲ್ಲಿ ಇದೆ. 5 ಸಾವಿರ ಚದರ ಮೀಟರ್ ಜಾಗದಲ್ಲಿ ಅಷ್ಟೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ, ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯ ಇಲ್ಲ ಎಂದು ಗುರುದ್ವಾರ ಆಡಳಿತ ಮಂಡಳಿ ವಾದಿಸಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app