
- ರೈತರ ಮಕ್ಕಳಿಗೆ ಹೆಣ್ಣು ಕೊಡದಿರುವ ವಿಚಾರ ಸಾಮಾಜಿಕ ಪಿಡುಗು
- ಅಳಿದುಳಿದ ರೈತರು ಪಟ್ಟಣಕ್ಕೆ ಬಂದರೆ ಆಹಾರ ಅಭದ್ರತೆ ಕಾಡಲಿದೆ
ರೈತ ಸಮುದಾಯದ ಯುವಕರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ₹10 ಲಕ್ಷ ಪ್ರೋತ್ಸಾಹಧನ ಕೊಡಿ ಎಂದು ಹಸಿರು ಪ್ರತಿಷ್ಠಾನದ ಅಧ್ಯಕ್ಷ ಕೆ ಜಿ ಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರೈತರ ಮಕ್ಕಳನ್ನು ಮದುವೆಯಾಗಲು ಹೆಣ್ಣು ಮಕ್ಕಳು ಒಪ್ಪುವುದಿಲ್ಲ. ಪೋಷಕರು ಕೂಡ ಯುವ ರೈತರಿಗೆ, ಹಳ್ಳಿಗೆ ಹೆಣ್ಣು ಕೊಡಲು ನಿರಾಕರಿಸುತ್ತಾರೆ. ಹಾಗಾಗಿ ರೈತಾಪಿ ಕುಟುಂಬಕ್ಕೆ ವಿವಾಹವಾಗುವ ಹೆಣ್ಣುಮಕ್ಕಳಿಗೆ ₹10 ಲಕ್ಷ ಪ್ರೋತ್ಸಾಹಧನ ಸೇರಿ ವಿಶೇಷ ಪ್ಯಾಕೇಜ್ ಘೋಷಿಸಬೇಕು" ಎಂದು ಅವರು ಹೇಳಿದರು.
"ದೇಶದ ಆಹಾರ ಭದ್ರತೆ, ಆಹಾರೋತ್ಪನ್ನದಲ್ಲಿ ಕೃಷಿಕರ ಪಾತ್ರ ದೊಡ್ಡದು. ದೇಶದ ಗಡಿ ಕಾಯುವ ಯೋಧನಷ್ಟೇ ರೈತನ ಪಾತ್ರ ಪ್ರಮುಖವಾದ್ದದ್ದು. ದೇಶದ ಬೆನ್ನೆಲುಬು ಅಂತ ಹೇಳುವ ರಾಜಕಾರಣಿಗಳು, ಹಸಿರು ಶಾಲು ಹಾಕಿಕೊಂಡು ಅಧಿಕಾರಕ್ಕೆ ಬರುವವರು ಗ್ರಾಮೀಣ ಯುವಕರ ಬಗ್ಗೆ ಚಿಂತಿಸಿ ಚರ್ಚೆ ನಡೆಸಿ ಪರಿಹಾರ ಒದಗಿಸಬೇಕು. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಸಿಗದಿರುವ ಸಮಸ್ಯೆಯ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿಬೇಕು" ಎಂದು ಕೆ ಜಿ ಕುಮಾರ್ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹೆಣ್ಣು ಪುರುಷನ ಅಡಿಯಾಳಲ್ಲ | ನಾವು ಗೋಬೆಲ್ಸ್ ಕಾಲದಲ್ಲಿಲ್ಲ, ಆದರೂ…
"ಅತಿವೃಷ್ಟಿ-ಅನಾವೃಷ್ಟಿ, ಸಾಲ, ಬೆಳೆಗಳಿಗೆ ಬೆಲೆಯ ಅನಿಶ್ಚಿತತೆಯಿಂದ ಬೇಸತ್ತ ರೈತರು, ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ನಗರಗಳಿಗೆ ವಲಸೆ ಬರುತ್ತಿದ್ದಾರೆ. ಉಳಿದಿರುವ ಕೆಲವು ಮಂದಿ ರೈತಾಪಿ ಯುವಕರು ವ್ಯವಸಾಯದಲ್ಲಿ ತೊಡಗಿದ್ದಾರೆ. ವಿವಾಹಕ್ಕೆ ವಧು ನಿರಾಕರಣೆ ಸಮಸ್ಯೆಯಿಂದ ಹಳ್ಳಿ ಯುವಕರು ಕೃಷಿ ಬಿಟ್ಟು ಪಟ್ಟಣದತ್ತ ಮುಖ ಮಾಡಿದರೆ ಆಹಾರ ಭದ್ರತೆಗೆ ಹೊಡೆತ ಬೀಳಲಿದೆ. ಈ ಸಮಸ್ಯೆ ಒಂದು ಸಾಮಾಜಿಕ ಪಿಡುಗಾಗಿದ್ದು ಪರಿಹಾರ ಕಂಡುಹಿಡಿಯುವ ತುರ್ತಿದೆ" ಎಂದು ಅವರು ಎಚ್ಚರಿಸಿದರು.

ಈ ವೇಳೆ ಹಸಿರು ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪಿ.ಕೆ. ಕುಮಾರ್, ಗೌರವಾಧ್ಯಕ್ಷ ಎ ಎಸ್ ಗೋವಿಂದೇಗೌಡ, ಕೋಶಾಧ್ಯಕ್ಷ ಕೆ. ವೇಣುಗೋಪಾಲ್ ಸೇರಿದಂತೆ ಹಲವರಿದ್ದರು.