
- ಪ್ರಯಾಣಿಕರ ತ್ವರಿತ ತಪಾಸಣೆಗಾಗಿ ಮೂರು ಫುಲ್ ಬಾಡಿ ಸ್ಕ್ಯಾನರ್ ಅಳವಡಿಕೆ
- ಪ್ರತಿಯೊಂದು ಸ್ಕ್ಯಾನರ್ಗೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ
ಮೊದಲ ಬಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಮೂರು ಪೂರ್ಣ ಬಾಡಿ ಸ್ಕ್ಯಾನರ್ ಅಳವಡಿಸಲಾಗಿದ್ದು, ಸಾರ್ವಜನಿಕರ ಸೇವೆಗೆ ಡಿಸೆಂಬರ್ನಲ್ಲಿ ಲಭ್ಯವಾಗಲಿವೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ತಿಳಿಸಿದೆ.
ಪ್ರಯಾಣಿಕರ ತ್ವರಿತ ತಪಾಸಣೆ ಮತ್ತು ಸುರಕ್ಷಿತ ವಿಮಾನ ಹಾರಾಟದ ದೃಷ್ಟಿಯಿಂದ ಈ ತಾಂತ್ರಿಕ ಉಪಕರಣವನ್ನು ಅಳವಡಿಸಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.
ಪ್ರತಿ ಸ್ಕ್ಯಾನರ್ಗೂ ಕೋಟಿ ವೆಚ್ಚ
ರೋಹ್ಡೆ ಮತ್ತು ಸ್ಕವಾರ್ಜ್ ಕಂಪನಿಯಿಂದ ಸ್ಕ್ಯಾನರ್ಗಳನ್ನು ಖರೀದಿಸಲಾಗಿದೆ. ಪ್ರತಿಯೊಂದು ಸ್ಕ್ಯಾನರ್ಗೂ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಉದ್ಯಾನ ನಗರಿಯಲ್ಲಿ ಮೋಡ ಕವಿದ ವಾತಾವರಣ; ಇನ್ನೂ ಮೂರು ದಿನ ಮಳೆ ಸಾಧ್ಯತೆ
ಬಾಡಿ ಸ್ಕ್ಯಾನರ್ನ ವಿಶೇಷತೆ
ಏರ್ಪೋರ್ಟ್ನ ಸೆಕ್ಯುರಿಟಿ ಕ್ಲಿಯರೆನ್ಸ್ ವಿಭಾಗದದಲ್ಲಿ ಈ ಮೂರು ಫುಲ್ ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ. ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಚೌಕಟ್ಟು ಇರುವ ಬಾಗಿಲನ್ನು ದಾಟಿ ಪ್ರಯಾಣಿಕರು ಒಳಗೆ ಪ್ರವೇಶಿಸಿದ ಬಳಿಕ, ಮತ್ತೆ ಎರಡನೇ ಸುತ್ತಿನಲ್ಲಿ ಭದ್ರತಾ ಸಿಬ್ಬಂದಿ ಮುಂದೆ ನಿಂತು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಸಿಕೊಳ್ಳುವುದರ ಅಗತ್ಯ ಇರುವುದಿಲ್ಲ ಎನ್ನಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್-2, ಆರಂಭದಲ್ಲಿ ದೇಶೀಯ ವಿಮಾನಗಳ ಹಾರಾಟಕ್ಕಷ್ಟೇ ಅವಕಾಶ ದೊರಯಲಿದೆ. ಜನವರಿಯಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭಿಸಲು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ನಿರ್ಧರಿಸಿದೆ.