ಬೆಂಗಳೂರು | ಚಾಮರಾಜಪೇಟೆ ಮೈದಾನದಲ್ಲಿ ಪ್ರತಿವರ್ಷ ಧ್ವಜಾರೋಹಣ: ಸಚಿವ ಆರ್ ಅಶೋಕ್

  • ಧ್ವಜಾರೋಹಣದ ವೇಳೆ ಮೈದಾನದ ಸುತ್ತ ಪೊಲೀಸ್ ಬಂದೋಬಸ್ತ್
  • ಧ್ವಜಾರೋಹಣ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಕ್ಕಳು ಭಾಗಿ

ಬೆಂಗಳೂರಿನ ಚಾಮರಾಜಪೇಟೆ ಆಟದ ಮೈದಾನದಲ್ಲಿ ಪ್ರತಿವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ಧ್ವಜಾರೋಹಣ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೈದಾನದ ಎದುರಿಗಿರುವ ಬಿಬಿಎಂಪಿ ಶಾಲೆಯ ಮುಂಭಾಗದಲ್ಲಿ ಧ್ವಜಾರೋಹಣ ನಡೆಯಲಿದೆ. 500ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, 200 ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ” ಎಂದರು.

“ಮೈದಾನದ ಸುತ್ತ ಪೊಲೀಸ್ ಬಂದೋಬಸ್ತ್ ಜೊತೆಗೆ ಎಲ್ಲಾ ಕಡೆ ಸಿಸಿಟಿವಿ ಅಳವಡಿಸಲಾಗಿದೆ. ದೇಶದ ಘನತೆಯ ಪ್ರಶ್ನೆ; ಎಲ್ಲರೂ ಭಾಗಿಯಾಗಿ ಸಂಭ್ರಮದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸೋಣ” ಎಂದರು.

“ಎಲ್ಲ ಸಮುದಾಯದವರು ಸೇರಿಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡಬೇಕು. ಈ ಹಿಂದೆ ಯಾಕೆ ಧ್ವಜಾರೋಹಣ ಮಾಡಿಲ್ಲ ಅಂತ ಜನರು ಪ್ರಶ್ನೆ ಕೇಳಿದ್ದಾರೆ. ಆದರೆ, ಈ ವರ್ಷವೇ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ತಿಳಿದ ಮೇಲೆ ಈ ವರ್ಷದಿಂದ ಧ್ವಜಾರೋಹಣ ಮಾಡಲು ನಿರ್ಧರಿಸಲಾಗಿದೆ" ಎಂದು ತಿಳಿಸಿದರು.

"ಭಯೋತ್ಪಾದಕರ ಬೆದರಿಕೆ ಇರುವ ಕಾಶ್ಮೀರದಲ್ಲೇ ಧ್ವಜಾರೋಹಣ ಮಾಡಿದ್ದೇವೆ. ಇಲ್ಲೂ ಕೂಡ ಮಾಡುತ್ತೇವೆ. ಎಲ್ಲ ಸಮುದಾಯದವರೂ ಸೇರಿಕೊಂಡು ಆಚರಣೆ ಮಾಡೋಣ" ಎಂದರು.

ಈದ್ಗಾ ಟವರ್ ವಿಚಾರ

"ಈ ಮೈದಾನದ ಒಳಗಡೆ ಬಿಬಿಎಂಪಿ ಕಟ್ಟಡ ಇದೆ. ಅಶ್ವತ್ಥ ಕಟ್ಟೆ ಇದೆ. ಸಾಕಷ್ಟು ಮರಗಳಿವೆ. ಯಾವುದೂ ಬದಲಾಗುವುದಿಲ್ಲ. ಹಾಗೆಯೇ ಮೈದಾನದ ಒಳಗಡೆ ಇರುವ ಈದ್ಗಾ ಟವರ್ ಕೂಡ ಬದಲಾಗುವುದಿಲ್ಲ. ಅದು ಕೂಡ ಹಾಗೆಯೇ ಇರುತ್ತೆ. ಯಾರಾದರೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದರೆ ಅಂಥವರನ್ನು ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಕಳಿಸುತ್ತೇವೆ" ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್