ಉದ್ಯಾನ ನಗರಿಗೂ ಕಾಲಿಟ್ಟ ಚಿರತೆ; ಕರುವಿನ ಮೇಲೆ ದಾಳಿ; ಬೆಂಗಳೂರು ದಕ್ಷಿಣದಲ್ಲಿ ಆತಂಕ

  • ರಾತ್ರಿ ವೇಳೆ ಹೊರಗಡೆ ಸಂಚರಿಸದಿರಲು ಸೂಚನೆ
  • ಈ ಹಿಂದೆ ತುರಹಳ್ಳಿ ಕಾಡು ಚಿರತೆಗಳ ತಾಣವಾಗಿತ್ತು 

ಅರಣ್ಯ ಪ್ರದೇಶದ ಭಾಗವಾಗಿರುವ ಬೆಂಗಳೂರಿನ ಬನಶಂಕರಿ ಆರನೇ ಹಂತದ ತುರಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಾಗರಿಕರು ಆತಂಕಗೊಂಡಿದ್ದಾರೆ. ನಾಗರಿಕರು ತಮ್ಮ ಜಾನುವಾರು ಕಳೆದುಕೊಳ್ಳುತ್ತಿದ್ದಾರೆ. 

ಚಿರತೆ ನ.21ರಂದು ತುರಹಳ್ಳಿ ಬಳಿಯ ರೈತರೊಬ್ಬರ ಕರುವನ್ನು ಹಿಡಿದು ಕೊಂದು ಸ್ಥಳದಲ್ಲೇ ಬಿಟ್ಟು ಹೋಗಿದೆ. ಕೊಂದ ಕರುವಿನ ಶವವನ್ನು ಚಿರತೆ ತೆಗೆದುಕೊಂಡು ಹೋಗಲು ಮರಳಿ ಬಂದರೆ ಸಿಕ್ಕಿಬೀಳಬಹುದು ಎಂಬ ಉದ್ದೇಶದಿಂದ ಅದೇ ಸ್ಥಳದಲ್ಲಿ ಅರಣ್ಯ ಇಲಾಖೆ ಬೋನ್‌ ಇರಿಸಿದೆ. ರಾತ್ರಿ ಸಮಯದಲ್ಲಿ ಹೊಲಗಳ ಬಳಿ ತೆರಳದಂತೆ, ಮನೆಯಿಂದ ಹೊರಗೆ ಹೋಗದಂತಯೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.  

Eedina App

ಬನಶಂಕರಿಯ ತಲಘಟ್ಟಪುರದ ತುರಹಳ್ಳಿಯಲ್ಲಿ ಇದೇ ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಮಾಧ್ಯಮಗಳಿಗೆ ತಿಳಿಸಿದೆ. ಈ ಪ್ರದೇಶದ ಹತ್ತಿರವೇ ದಟ್ಟವಾದ ಅರಣ್ಯವಿರುವುದರಿಂದ ಚಿರತೆ ಇರಬಹುದು ಎಂದು  ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿಂದೆ ತುರಹಳ್ಳಿ ಅರಣ್ಯವು ಚಿರತೆಗಳ ತಾಣವಾಗಿತ್ತು. ಆದರೆ ಇತ್ತೀಚೆಗೆ ಅರಣ್ಯದ ಸಮೀಪ ವಸತಿ ಪ್ರದೇಶಗಳು ತಲೆ ಎತ್ತಿವೆ.  

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕಂಡಕ್ಟರ್‌ಗಳಿಗೆ ಎಲೆಕ್ಟ್ರಾನಿಕ್ ಟಿಕೆಟ್‌ ಮಷಿನ್ ಒದಗಿಸಲು ಮುಂದಾದ ಬಿಎಂಟಿಸಿ

AV Eye Hospital ad

ಈ ಅರಣ್ಯಕ್ಕೆ ಬಿಎಂ ಕಾವಲ್ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಂಪರ್ಕವೂ ಹತ್ತಿರದಲ್ಲೇ ಇರುವುದರಿಂದ ಚಳಿಗಾಲದಲ್ಲಿ ಚಿರತೆಗಳು ಮರಿಗಳಿಗೆ ಜನ್ಮ ನೀಡುತ್ತವೆ ಮತ್ತು ಅವು ಆಹಾರವನ್ನು ಹುಡುಕುತ್ತಾ ನಗರದ ಒಳಗೆ ಬರುತ್ತವೆ ಎಂದು ಅರಣ್ಯ ಇಲಾಖೆ ತಿಳಿಸಿದೆ. 

ಈ ಹಿಂದೆಯೂ ಬಂದಿತ್ತು ಚಿರತೆ!

ಈ ವರ್ಷದ ಆರಂಭದಲ್ಲಿ ಯಲಹಂಕದ ಗಾಲಿ ಮತ್ತು ಅಚ್ಚು ಕಾರ್ಖಾನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆಯೊಂದು ಸೆರೆಯಾಗಿತ್ತು. 2021ರಲ್ಲಿ ಬೇಗೂರಿನ ಅಪಾರ್ಟ್‌ಮೆಂಟ್‌ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. 2019ರಲ್ಲಿ ಯಲಹಂಕದ ಐಟಿಸಿ ಫ್ಯಾಕ್ಟರಿ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಅದನ್ನು ಸೆರೆ ಹಿಡಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಲಾಗಿತ್ತು. 2016ರಲ್ಲಿ ವೈಟ್‌ಫೀಲ್ಡ್‌ನಲ್ಲಿರುವ ಶಾಲಾ ಆವರಣಕ್ಕೆ ಚಿರತೆಯೊಂದು ನುಗ್ಗಿ ಆರು ಜನರ ಮೇಲೆ ದಾಳಿ ನಡೆಸಿತ್ತು

ನಿಮಗೆ ಏನು ಅನ್ನಿಸ್ತು?
0 ವೋಟ್
eedina app