ಫಲಪುಷ್ಪ ಪ್ರದರ್ಶನ | ಲಾಲ್‌ಬಾಗ್‌ ಶುಚಿತ್ವ ಕಾಪಾಡಲು ಸಕಲ ವ್ಯವಸ್ಥೆ

Lalbhag
  • ಲಾಲ್‌ಬಾಗ್‌ ಶುಚಿತ್ವಕ್ಕೆ 100 ಮಂದಿಯನ್ನು ಆಯೋಜಿಸಲಾಗಿದೆ
  • ಆಗಸ್ಟ್‌ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಲುವಾಗಿ, ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿರುವುದರಿಂದ ಉದ್ಯಾನವನದ ಶುಚಿತ್ವ ಕಾಪಾಡಲು ಇಲಾಖೆ ಸಜ್ಜಾಗಿದ್ದು, ದಿನದಿಂದ ದಿನಕ್ಕೆ ತ್ಯಾಜ್ಯ ವಿಲೇವಾರಿಯ ಕಾರ್ಯಗಳು ನಡೆಯುತ್ತಿವೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಕುಸುಮಾ ಜಿ ಹೇಳಿದರು.

ಆಗಸ್ಟ್‌ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6.30ರವರೆಗೆ ಇರಲಿದೆ.

"ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬರುವ ಮಂದಿ ಪ್ರತಿದಿನ ತಮಗೆ ಬೇಕಾದ ಪಾನೀಯ ಅಥವಾ ತಿಂಡಿ ತಿನಿಸುಗಳನ್ನು ತಿಂದು ಎಲ್ಲೆಂದರಲ್ಲಿ ಕಸ ಬಿಸಾಡಿರುತ್ತಾರೆ. ಹೀಗಾಗಿ ಕಸ ನಿರ್ವಹಣೆಗೆ ಮತ್ತು ಲಾಲ್‌ಬಾಗ್‌ನ ನೈರ್ಮಲ್ಯ ಕಾಪಾಡಲು 100 ಮಂದಿ ಕೆಲಸಗಾರನ್ನು ಶುಚಿತ್ವಕ್ಕೆಂದೆ ನೇಮಿಸಿಕೊಳ್ಳಲಾಗಿದೆ" ಎಂದು ಕುಸುಮಾ ಜಿ ಹೇಳಿದರು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸ್ವಾತಂತ್ಯ್ರ ದಿನಾಚರಣೆ: ಈದ್ಗಾ ಮೈದಾನದಲ್ಲಿ ಪೊಲೀಸರಿಂದ ಬಿಗಿ ಭದ್ರತೆ

"ಪ್ಲಾಸ್ಟಿಕ್‌ ತ್ಯಾಜ್ಯ ತಪ್ಪಿಸಲು ಬಳಸಿದ ನೀರಿನ ಬಾಟಲಿಗಳನ್ನು ಸಂಗ್ರಹಿಸಲಾಗುತ್ತಿದೆ. ಜೊತೆಗೆ ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಸಹ ಮಾರಾಟ ಮಾಡುತ್ತಿದ್ದೇವೆ. ಘನತ್ಯಾಜ್ಯ ನಿರ್ವಹಣೆಯ ಕುರಿತು 50 ಮಂದಿ ಸ್ವಯಂ ಸೇವಕರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ" ಎಂದು ಅವರು ತಿಳಿಸಿದರು.

"ಲಾಲ್‌ಬಾಗ್‌ನಲ್ಲಿ ನಡೆಯುವ ಪುಷ್ಪ ಪ್ರದರ್ಶನದ ವೇಳೆ ಶೂನ್ಯ ತ್ಯಾಜ್ಯ ಉತ್ಪಾದನೆಯ ಬಗ್ಗೆ ಪ್ರವಾಸಿಗರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ವರ್ಷ ಮಾರಾಟಗಾರರು ಮುಂಜಾಗ್ರತೆ ವಹಿಸಲಾಗುತ್ತಿದ್ದು, ಪ್ಲಾಸ್ಟಿಕ್‌ ಬಳಕೆಗೆ ಕೊಂಚ ವಿದಾಯ ಹೇಳಿದ್ದಾರೆ" ಎಂದು ಘನತ್ಯಾಜ್ಯ ನಿರ್ವಹಣೆ ದುಂಡು ಮೇಜಿನ ಸದಸ್ಯ ಎನ್ ಎಸ್ ರಮಾಕಾಂತ್ ಹೇಳಿದರು.

"ಸಂಚಾರ ದಟ್ಟಣೆ ಮತ್ತು ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಕಂಡುಬಂದಲ್ಲಿ ವಾಹನ ಮಾಲೀಕರ ಮೇಲೆ ಕ್ರಮ ಕೈಗೊಳ್ಳುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಗಳು ಕಡಿಮೆಯಾಗಿವೆ. ವಾಹನ ದಟ್ಟಣೆಯ ಸಮಸ್ಯೆಯಿಲ್ಲ" ಎಂದು ಬೆಂಗಳೂರಿನ ಸಂಚಾರ ಪೊಲೀಸರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್