ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೊ ವಿಸ್ತರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ

  • 20.5 ಕಿ.ಮೀ ಉದ್ದದ ಮೆಟ್ರೊ ರೈಲು ಮಾರ್ಗ ವಿಸ್ತರಣೆ ಯೋಜನೆ
  • ಮೆಟ್ರೊ ಮಾರ್ಗದಿಂದ ಉಭಯ ರಾಜ್ಯ ಪ್ರಯಾಣಿಕರಿಗೂ ಅನುಕೂಲ

ಬೆಂಗಳೂರು ನಗರದ ಬೊಮ್ಮಸಂದ್ರ ಆರ್ ವಿ ರಸ್ತೆ ಬಳಿಯಿಂದ ತಮಿಳುನಾಡಿನ ಹೊಸೂರುವರೆಗೆ ಅಂದಾಜು 20.5 ಕಿ.ಮೀ ಉದ್ದದ ಮೆಟ್ರೊ ರೈಲು ಮಾರ್ಗ ವಿಸ್ತರಣೆ ಯೋಜನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.

ಬಿಎಂಆರ್‌ಸಿಎಲ್‌ನ ಎರಡನೇ ಹಂತದ ಯೋಜನೆ ಆರ್ ವಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರದ ವರೆಗೂ ಅನುಷ್ಠಾನವಾಗುತ್ತಿದೆ. ಇದರೊಂದಿಗೆ ತಮಿಳುನಾಡಿನ ಹೊಸೂರುವರೆಗೆ 20.5 ಕಿ.ಮೀ ಉದ್ದದ ಮೆಟ್ರೊ ಮಾರ್ಗ ವಿಸ್ತರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.

ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ವಿಷಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ಮೇ 23ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

11.7 ಕಿ.ಮೀ ಕರ್ನಾಟಕ ಮತ್ತು 8.8 ಕಿ.ಮೀ. ತಮಿಳುನಾಡು ವ್ಯಾಪ್ತಿಯಲ್ಲಿ ಬರಲಿದೆ. ಕರ್ನಾಟಕ ಸರ್ಕಾರ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಬೊಮ್ಮಸಂದ್ರ- ಹೊಸೂರು ನಡುವಣ ಮೆಟ್ರೊ ಮಾರ್ಗದಲ್ಲಿ 2017ರ ಮೆಟ್ರೊ ರೈಲು ನೀತಿ ಪ್ರಕಾರ ಅಧ್ಯಯನ ಕೈಗೊಳ್ಳುವುದು ಸೂಕ್ತ ಎಂದು ಅಂಜುಂ ಪರ್ವೇಜ್ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

“ಮೆಟ್ರೊ ರೈಲು ಮಾರ್ಗ ವಿಸ್ತರಣೆ ಸಂಬಂಧ ಮೇ 23 ರಂದು ಬಿಎಂಆರ್ ಸಿಎಲ್ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆ ಅನುಷ್ಟಾನಕ್ಕೆ ಅಧ್ಯಯನ ನಡೆಸುವಂತೆ ತಮಿಳುನಾಡು ಸರ್ಕಾರವನ್ನು ಕರ್ನಾಟಕ ಕೇಳಿದೆ” ಎಂದು ಕೃಷ್ಣಗಿರಿ ಸಂಸದ ಡಾ. ಎ ಚೆಲ್ಲಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಬೊಮ್ಮಸಂದ್ರ ಮತ್ತು ಹೊಸೂರು ನಡುವಿನ ಮೆಟ್ರೊ ಮಾರ್ಗದಿಂದ ಉಭಯ ರಾಜ್ಯಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಯೋಜನಾ ವೆಚ್ಚ ಮತ್ತು ವಿತ್ತೀಯ ಬೆಂಬಲವನ್ನು ಹಂಚಿಕೊಳ್ಳುವಲ್ಲಿ ಎರಡು ರಾಜ್ಯಗಳ ನಡುವೆ ಸಮನ್ವಯತೆಯ ಅಗತ್ಯವಿದೆ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಿಜಾಬ್ ವಿವಾದ | ಆರು ವಿದ್ಯಾರ್ಥಿನಿಯರ ಅಮಾನತು ಹಿಂಪಡೆದ ಮಂಗಳೂರು ಕಾಲೇಜು

“ಪ್ರಸ್ತಾವನೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಶೀಘ್ರದಲ್ಲಿಯೇ ಭೇಟಿಯಾಗಿ ಚರ್ಚಿಸುವುದಾಗಿ ಅವರು ಹೇಳಿದ್ದು, ಯೋಜನೆಗಾಗಿ ವಿಸ್ತೃತಾ ಯೋಜನಾ ವರದಿ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಲಾವುದು” ಎಂದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್