ಹರ್ ಘರ್ ತಿರಂಗಾ | ಬಿಬಿಎಂಪಿಗೆ ರಾಷ್ಟ್ರಧ್ವಜವನ್ನು ಗೌರವಯುತವಾಗಿ ತೆಗೆದಿಡುವ ಸವಾಲು

  • ಆಗಸ್ಟ್ 13ರಂದು ಆರಂಭವಾದ ಹರ್ ಘರ್ ತಿರಂಗಾ ಅಭಿಯಾನ
  • 75,000 ಧ್ವಜಗಳು ದೋಷದಿಂದ ಕೂಡಿವೆ: ತುಷಾರ್ ಗಿರಿನಾಥ್

‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ತೆರೆ ಬಿದ್ದಿದೆ. ನಾಗರಿಕರು ತಮ್ಮ ಮನೆಯ ಮೇಲೆ ಹಾರಿಸಿದ್ದ ರಾಷ್ಟ್ರಧ್ವಜವನ್ನು ಧ್ವಜಸಂಹಿತೆಗೆ ಅನುಗುಣವಾಗಿ, ಗೌರವಯುತವಾಗಿ ತೆಗೆದಿಡಬೇಕು. ಸದ್ಯ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಅದೇ ಒಂದು ಸವಾಲಾಗಿ ಪರಿಣಮಿಸಿದೆ. 

ಆಗಸ್ಟ್ 13ರಂದು ಆರಂಭಗೊಂಡ ಹರ್ ಘರ್ ತಿರಂಗಾ ಅಭಿಯಾನದಡಿ ಬಿಬಿಎಂಪಿಯು ಬೆಂಗಳೂರು ನಗರದಲ್ಲಿ ಸುಮಾರು 15 ಲಕ್ಷ ಧ್ವಜಗಳನ್ನು ಅಪಾರ್ಟ್‌ಮೆಂಟ್ ಕ್ಷೇಮಾಭಿವೃದ್ಧಿ ಸಂಘಗಳು, ವಾಣಿಜ್ಯ ಸಂಸ್ಥೆಗಳು, ಸೇವಾ ಪೂರೈಕೆದಾರರು, ನೈರ್ಮಲ್ಯ ಕಾರ್ಯಕರ್ತರು ಸೇರಿದಂತೆ ನಾಗರಿಕರಿಗೆ ವಿತರಿಸಿತ್ತು. ಅಲ್ಲದೆ, ರಾಜಕೀಯ ಪಕ್ಷಗಳು ಕೂಡ ತಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತ್ರಿವರ್ಣ ಧ್ವಜಗಳನ್ನು ವಿತರಿಸಿದ್ದವು. ಆದರೆ, ಈಗ ಅವುಗಳನ್ನು ಗೌರವಯುತವಾಗಿ ತೆಗೆದಿಡುವುದು ಅಥವಾ ವಿಲೇವಾರಿ ಮಾಡುವುದು ಅಂದುಕೊಂಡಿರುವಷ್ಟು ಸುಲಭವಲ್ಲ.

ತ್ರಿವರ್ಣ ಧ್ವಜವನ್ನು ತೆಗೆಯುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಭಾರತದ ಧ್ವಜ ಸಂಹಿತೆ ತಿಳಿಸುತ್ತದೆ. ಹಾನಿಗೊಳಗಾದ ಧ್ವಜಗಳನ್ನು ನಾಶಪಡಿಸಲೂ ಮಾರ್ಗಸೂಚಿಗಳಿವೆ. ಹಾನಿಯಾದ ಧ್ವಜಗಳನ್ನು ಘನತೆಯಿಂದ ಸುಡಬೇಕು ಅಥವಾ ಹೂಳಬೇಕು. ಹೂಳುವಾಗ ಧ್ವಜಗಳನ್ನು ಮರದ ಪೆಟ್ಟಿಗೆಯಲ್ಲಿಟ್ಟು ಮಣ್ಣಿನಲ್ಲಿ ಮುಚ್ಚಬೇಕು ಎಂದು ಧ್ವಜ ಸಂಹಿತೆ ಹೇಳುತ್ತದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆ ಆರ್ ಮಾರುಕಟ್ಟೆ ಸುರಂಗ ಮಾರ್ಗದಲ್ಲಿ ಮಹಿಳಾ ವ್ಯಾಪಾರಿಗಳಿಗೆ ಸ್ಥಳಾವಕಾಶ

ತೆಗೆಯಲಾಗುತ್ತಿರುವ ಹಾಗೂ ಹಾನಿಗೊಳಗಾಗಿರುವ ಧ್ವಜಗಳನ್ನು ಗೌರವದಿಂದ ನಾಶಪಡಿಸಲು ಪೌರ ಕಾರ್ಮಿಕರು ಮತ್ತು ಮಾರ್ಷಲ್‌ಗಳಿಗೆ ಜಾಗೃತಿ ಮೂಡಿಸಿದ್ದೇವೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಾವು ಸುಮಾರು 15 ಲಕ್ಷ ಧ್ವಜಗಳನ್ನು ವಿತರಿಸಿದ್ದೇವೆ. ಅದರಲ್ಲಿ 75,000 ದೋಷದಿಂದ ಕೂಡಿವೆ. ಅವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸುತ್ತೇವೆ” ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

“ನಗರದಾದ್ಯಂತ ಹಾರಿಸಲಾದ ಧ್ವಜಗಳನ್ನು ಹಿಂಪಡೆಯಲು ಕೆಲವು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಮತ್ತು ಸ್ವಯಂಸೇವಕ ಗುಂಪುಗಳು ಸಹ ಮುಂದೆ ಬಂದಿವೆ. ಯಾವುದೇ ಧ್ವಜವನ್ನು ಅಗೌರವಯುತವಾಗಿ ತೆಗೆಯಲು ಬಿಡುವುದಿಲ್ಲ. ಮನೆಗಳಲ್ಲಿ ಅಜಾಗರೂಕತೆಯಿಂದ ಇಟ್ಟುಕೊಳ್ಳದಂತೆ ಖಾತ್ರಿಪಡಿಸಿಕೊಳ್ಳಲು ಎನ್‌ಜಿಒ ಹಾಗೂ ಸ್ವಯಂ ಸೇವಕ ಗುಂಪುಗಳು ನೆರವು ನೀಡುತ್ತಿವೆ” ಎಂದು ಅವರು ಹೇಳಿದ್ದಾರೆ.

“ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ರಾಜ್ಯದಾದ್ಯಂತ ಇಂಧನ ಕೇಂದ್ರಗಳಲ್ಲಿ ಧ್ವಜಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡುತ್ತಿದೆ. ನಾವು ಬಾಣಸವಾಡಿ ಇಂಧನ ಕೇಂದ್ರದಲ್ಲಿ ಧ್ವಜಗಳನ್ನು ಸಂಗ್ರಹಿಸುತ್ತಿದ್ದೇವೆ. ಶೀಘ್ರದಲ್ಲೇ ಇತರ ಒಂಬತ್ತು ಬಂಕ್‌ಗಳಲ್ಲಿ ಧ್ವಜಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೇವೆ” ಎಂದು ಐಒಸಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಹಿತಿ ಮೂಲ: ಡೆಕ್ಕನ್ ಹೆರಾಲ್ಡ್
ನಿಮಗೆ ಏನು ಅನ್ನಿಸ್ತು?
0 ವೋಟ್