ರಸ್ತೆಗುಂಡಿ ಮುಚ್ಚುವಲ್ಲಿ ನಿರ್ಲಕ್ಷ್ಯ ; ಪಾಲಿಕೆ ಅಧಿಕಾರಿಗಳ ಮೇಲೆ ಹೈಕೋರ್ಟ್‌ ಗರಂ

High Court
  • ಇಂಜಿನಿಯರ್‌ಗಳನ್ನು ಜೈಲಿಗೆ ಕಳುಹಿಸಿ ಸಮಸ್ಯೆ ಬಗೆಹರಿಸಲಾಗದು
  • ವಿಚಾರಣೆ 15 ದಿನ ಮುಂದೂಡಿದ ಹೈಕೋರ್ಟ್ ಪೀಠ

ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, "ನಾವೇ ಕ್ರಿಯಾ ಯೋಜನೆ ರೂಪಿಸಿ, ಕೆಲಸ ಮಾಡಿಸಬೇಕಿದೆ" ಎಂದು ಅಸಮಾಧಾನ ಹೊರ ಹಾಕಿದೆ.

ರಸ್ತೆಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ (ಪಿಐಎಲ್‌) ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿದೆ.

"ಬೆಂಗಳೂರಿನಲ್ಲಿ ಗುಂಡಿಬಿದ್ದ ರಸ್ತೆಗಳಿಂದ ಜನರು ಸಾಯುವುದನ್ನು ನೋಡಲಾಗದು. ಎಲ್ಲಿಯವರೆಗೆ ನಾವು ಇದನ್ನು ಸಹಿಸಬೇಕು? ನೀವು ಸಂವೇದನಾ ಶೂನ್ಯರಾಗಿದ್ದೀರಿ. ನಿಂದಿಸುವುದನ್ನೂ ಸೇರಿದಂತೆ ನಾವೂ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೂ ನೀವು ಕೆಲಸದ ಬಗ್ಗೆ ಗಂಭೀರವಾಗಿಲ್ಲ. ಈಗ ನಾವೇ ಕ್ರಿಯಾ ಯೋಜನೆ ರೂಪಿಸಿ ಕೆಲಸ ಮಾಡಿ ಎಂದು ನೀಡಬೇಕಿದೆ" ಎಂದು ನ್ಯಾಯಾಲಯ ವಿಷಾದಿಸಿದೆ.

"ಗುಂಡಿಬಿದ್ದ ರಸ್ತೆಗಳಿಂದ ಯಾರೋ ಒಬ್ಬರು ಸತ್ತಿದ್ದಾರೆ ಎಂಬ ಪತ್ರಿಕಾ ವರದಿಗಳನ್ನು ನೋಡಿದಾಗ ನಮಗೆ ಪಾಪ ಪ್ರಜ್ಞೆ ಕಾಡುತ್ತದೆ" ಎಂದು ಪಾಲಿಕೆ ವಿರುದ್ಧ ಪೀಠ ಆಕ್ರೋಶ ವ್ಯಕ್ತಪಡಿಸಿದೆ. 

"ನಿಮ್ಮ ಇಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಅವರನ್ನು ಜೈಲಿಗೆ ಕಳುಹಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ನೀವು ನೀಡುವ ಸ್ಥಿತಿಗತಿ ವರದಿಯನ್ನು ನೋಡಿ ನಾವು ಪ್ರಧಾನ ಇಂಜಿನಿಯರ್‌ ಅವರಿಗೆ ಕಲಾಪದಲ್ಲಿ ಭಾಗವಹಿಸುವುದರಿಂದ ವಿನಾಯಿತಿ ನೀಡುವ ಕುರಿತು ಯೋಚಿಸುತ್ತೇವೆ. ಇಲ್ಲವಾದಲ್ಲಿ ಏನಾಗುತ್ತದೋ ನಮಗೆ ಗೊತ್ತಿಲ್ಲ" ಎಂದು ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರಿಗೆ ನ್ಯಾಯಾಲಯ ತಿಳಿಸಿದೆ.

"ಸುಧಾರಿತ ತಂತ್ರಜ್ಞಾನ ಹೊಂದಿರುವ ಯಂತ್ರವನ್ನು ಬಳಸಿ ಗುಣಮಟ್ಟದ ರಸ್ತೆ ನಿರ್ಮಾಣವಾಗಬೇಕು. ಬೆಂಗಳೂರಿನ ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟ್ರಿಕ್ಟ್‌ (ಸಿಬಿಡಿ) ವ್ಯಾಪ್ತಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ರಿಪೇರಿ ಮಾಡುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು. 15 ದಿನಗಳಲ್ಲಿ ಆ ಕೆಲಸ ಮುಗಿಯಬೇಕು" ಎಂದು ಪೀಠವು ಗಡುವು ವಿಧಿಸಿ, ಮುಂದಿನ ವಿಚಾರಣೆಯನ್ನು 15 ದಿನ ಮುಂದೂಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್