ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

  • ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್
  • ಯಾವ ಜಾತಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಪಟ್ಟಿ ನೀಡಿಲ್ಲ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಾರ್ಡ್‌ವಾರು ಮೀಸಲಾತಿಗೆ ಸಂಬಂಧಿಸಿದಂತೆ, ಸೆಪ್ಟೆಂಬರ್ 12ರೊಳಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿದೆ.

ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ವಾರ್ಡ್‌ವಾರು ಮೀಸಲಾತಿ ಅಧಿಸೂಚನೆ ರದ್ದುಪಡಿಸುವಂತೆ ಈಜಿಪುರ ನಿವಾಸಿ ಕೆ ಮಹದೇವ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿತು.

‘ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿ ಮಾಡುವ ವಿಚಾರದಲ್ಲಿ ಭಕ್ತವತ್ಸಲಂ ಸಮಿತಿ ವರದಿ ಆಧರಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ' ಎಂದು ಸರ್ಕಾರ ತಿಳಿಸಿದೆ.

AV Eye Hospital ad

'ಭಕ್ತವತ್ಸಲಂ ಸಮಿತಿ ನೀಡಿದ ವರದಿ ಮೂರು ಹಂತದ ಪರಿಶೀಲನೆ(ಟ್ರಿಪಲ್ ಟೆಸ್ಟ್) ಅನ್ವಯಿಸಿಲ್ಲ ಹಾಗೂ ಯಾವ ಜಾತಿಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಪಟ್ಟಿಯನ್ನೂ ನೀಡಿಲ್ಲ. ಹಾಗಾಗಿ, ನಗರಾಭಿವೃದ್ಧಿ ಇಲಾಖೆ ನೀಡಿರುವ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಅರ್ಜಿದಾರ ಕೆ ಮಹದೇವ ಮನವಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಬೆಂಗಳೂರಿನ ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಮದ್ಯ ಮಾರಾಟ ನಿಷೇಧ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, 'ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ನಿಗದಿ ವಿಚಾರದಲ್ಲಿ ಯಾವುದೇ ನಿಯಮ ಪಾಲನೆಯಾಗಿಲ್ಲ. ಸುಪ್ರೀಂಕೋರ್ಟ್‌ನ ತೀರ್ಪಿನ ಪ್ರಕಾರ ರಾಜಕೀಯ ಮೀಸಲಾತಿಗೆ ಬೇರೆ ಮಾನದಂಡ ಇದೆ. ಶಿಕ್ಷಣ, ಉದ್ಯೋಗಗಳಿಗೆ ಮೀಸಲು ನೀಡುವಂತೆ ರಾಜಕೀಯ ಮೀಸಲು ನೀಡಲು ಸಾಧ್ಯವಿಲ್ಲ. ರಾಜಕೀಯದಲ್ಲಿ ಯಾವ ಜಾತಿಗಳಿಗೆ ಪ್ರಾತಿನಿಧ್ಯ ನೀಡಲ್ಲವೋ ಅಂತಹ ಜಾತಿಗಳಿಗೆ ಮೀಸಲು ಕಲ್ಪಿಸಬೇಕಾಗುತ್ತದೆ. ಆದರೆ, ಇದು ಯಾವುದನ್ನು ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿಯಲ್ಲಿ ಪಾಲಿಸಿಲ್ಲ. ಮೀಸಲಾತಿ ರಚಿಸಿದ ಭಕ್ತವತ್ಸಲ ಸಮಿತಿ ಕೂಡಾ ಸೂಕ್ತ ವಿಧಾನ ಅನುಸರಿಸಿಲ್ಲ. ಯಾವ ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂಬ ಕುರಿತು ಪಟ್ಟಿ ನೀಡಿಲ್ಲ. ಹಾಗಾಗಿ, ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಬೇಕು' ಎಂದು ನ್ಯಾಯಪೀಠಕ್ಕೆ ಅವರು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿ, ಅಷ್ಟರೊಳಗೆ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಆದೇಶಿಸಿತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app