ಬೆಂಗಳೂರು | ಮಳೆಗೆ ಹೈರಾಣಾದ ರಾಜಧಾನಿ ಜನತೆ: ಇನ್ನೂ ಎರಡು ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ

  • ಮಹದೇವಪುರ ವಲಯದ ಬಡಾವಣೆಗಳಿಗೆ ನುಗ್ಗಿದ ಮಳೆ ನೀರು
  • ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ: ಹವಾಮಾನ ಇಲಾಖೆ

ರಾಜ್ಯ ರಾಜಧಾನಿಯಲ್ಲಿ ಆಗುತ್ತಿರುವ ಮಳೆಯಿಂದ ಜನರು ಹೈರಾಣಾಗಿದ್ದು, ನಗರದ ರಸ್ತೆಗುಂಡಿಗಳಲ್ಲಿ ಹಾಗೂ ಅಂಡರ್ ಪಾಸ್‌ಗಳಲ್ಲಿ ನೀರು ನಿಂತು ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.

ಬೆಂಗಳೂರಿನ ಮಹದೇವಪುರ ವಲಯ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ರಾಜಕಾಲುವೆ ಸಮಸ್ಯೆಯಿಂದ ಒಳಚರಂಡಿ ನೀರಿನೊಂದಿಗೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಉದ್ಯಾನನಗರಿಯ ಜನ ಕಂಗಾಲಾಗಿದ್ದಾರೆ.

ಬೆಂಗಳೂರಿನಲ್ಲಿ ಆಗಿರುವ ಮಳೆಯ ಹಾನಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ”ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದೆ. ಜಯನಗರ, ಹೆಬ್ಬಾಳ ಹಾಗೂ ಮಹದೇವಪುರ, ಕೆ ಆರ್ ಪುರಂ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಆಗಸ್ಟ್ 5ರವರೆಗೆ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ” ಎಂದು ಹೇಳಿದರು.

“ನಾಗಪ್ಪರೆಡ್ಡಿ ಲೇಔಟ್‌, ಸಾಯಿ ಲೇಔಟ್, ಗುರುರಾಜ ಬಡಾವಣೆ ಹಾಗೂ ಹೆಚ್ ಆರ್ ಬಿ ಆರ್ ಲೇಔಟ್‌ಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಿಬಿಎಂಪಿ ಸಿಬ್ಬಂದಿ ಪಂಪ್ ಔಟ್‌ಗಳನ್ನು ಬಳಸಿ ಮನೆಗೆ ನುಗ್ಗಿದ ನೀರನ್ನು ಹೊರ ಹಾಕುತ್ತಿದ್ದಾರೆ” ಎಂದು ಹೇಳಿದರು.

ಹವಾಮಾನ ಇಲಾಖೆ ತಜ್ಞ ಪ್ರಸಾದ ಈ ದಿನ.ಕಾಮ್ ಜತೆಗೆ ಮಾತನಾಡಿ, ”ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ. 7 ಸೆಂ. ಮೀ ಮಳೆಯಾಗುವ ನಿರೀಕ್ಷೆಯಿದೆ. ಈಗಾಗಲೇ ನಗರದಲ್ಲಿ ಸೋಮವಾರದಿಂದ ಮಳೆಯಾಗುತ್ತಿದ್ದು, 7 ಸೆಂ.ಮೀ ಮಳೆಯಾಗಿದೆ. ಮುಂಜಾಗೃತಾ ಕ್ರಮವಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ” ಎಂದು ಹೇಳಿದರು.

ಈ ದಿನ.ಕಾಮ್ ಜತೆಗೆ ಮಾತನಾಡಿದ ಮಹದೇವಪುರ ವಲಯದ ಜಂಟಿ ಆಯುಕ್ತ ಎಮ್ ವೆಂಕಟಾಚಲಪತಿ, ”ರಾಜಕಾಲುವೆ ಸಮಸ್ಯೆಯಿಂದ ವಲಯ ವ್ಯಾಪ್ತಿಯ ಸಾಯಿ ಲೇಔಟ್, ಗುರುರಾಜ ಬಡಾವಣೆ ಸೇರಿದಂತೆ ಸುತ್ತ ಮುತ್ತಲಿನ ಐದು ಬಡಾವಣೆಗಳಿಗೆ ಮಳೆ ನೀರು ನುಗ್ಗಿದೆ. ನೀರನ್ನು ಹೊರತೆಗೆಯುವ ಕಾರ್ಯ ನಡೆಯುತ್ತದೆ” ಎಂದು ಹೇಳಿದರು.

"ಹೊರಮಾವು ಪ್ರದೇಶದಲ್ಲಿ ಮಳೆ ನೀರು ತುಂಬಿದೆ. ರೈಲ್ವೆ ಸೇತುವೆ ಸಮೀಪದ ರಾಜಕಾಲುವೆ ಸಮಸ್ಯೆಯಿಂದ ನೀರು ಹೊರಬಂದಿದೆ. ಮುಂದಿನ ಎರಡು ದಿನಗಳು ಮಳೆಯಾಗುವ ಸಂಭವವಿದೆ. ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಸಿಬ್ಬಂದಿ ಸಾಯಿ ಲೇಔಟ್‌ನಲ್ಲಿ ಇದ್ದಾರೆ” ಎಂದು ಹೇಳಿದರು.

"ಮಲ್ಲೇಶ್ವರಂ, ಸಿ ವಿ ರಾಮನ್ ನಗರ, ಆರ್ ಆರ್ ನಗರ, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ನಗರದೆಡೆ ಒಟ್ಟು 8 ಮರಗಳು ಬಿದ್ದಿರುವ ದೂರುಗಳು ಬಂದಿವೆ. ಮಹದೇವಪುರ ವಲಯದ ಸುತ್ತಮುತ್ತಲಿನ ಬಡಾವಣೆಗಳಲ್ಲಿ ರಾಜಕಾಲುವೆ ಸಮಸ್ಯೆಯಿಂದ ಹಲವು ಮನೆಗಳಿಗೆ ಮಳೆ ನೀರು ಜತೆಗೆ ಚರಂಡಿ ನೀರು ನುಗ್ಗಿರುವ ದೂರುಗಳು ಬಂದಿವೆ" ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ದಿನ.ಕಾಮ್‌ಗೆ ಮಾಹಿತಿ ನೀಡಿದರು.

ಬೆಂಗಳೂರಿನ ಯಾವ ಯಾವ ಪ್ರದೇಶಗಳಲ್ಲಿ ಮಳೆ

ಬೆಂಗಳೂರಿನ ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಉತ್ತರಹಳ್ಳಿ, ವಿದ್ಯಾಪೀಠ, ಜಯನಗರ, ಗೊಟ್ಟಿಗೆರೆ, ನಾಗರಬಾವಿ, ಕೆಂಗೇರಿ, ಗಾಳಿ ಆಂಜನೇಯ ದೇವಸ್ಥಾನ, ಸಂಪಂಗಿರಾಮನಗರ, ವಿಜಯನಗರ, ಶ್ರೀರಾಮಪುರ, ಮಹದೇವಪುರದಲ್ಲಿ ಹೆಚ್ಚು ಮಳೆಯಾಗಿದೆ. ಹಾಗೂ ಉಳಿದ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ.

ಈ ಸುದ್ದಿ ಓದಿದ್ದೀರಾ? ಮಳೆ ಹಾನಿ | ಸಮರೋಪಾದಿಯಲ್ಲಿ ರಕ್ಷಣೆ, ಪರಿಹಾರ, ಪುನಶ್ಚೇತನ ಕಾರ್ಯ ಕೈಗೊಳ್ಳಿ: ಸಿಎಂ ಸೂಚನೆ

ಸಾಯಿ ಲೇಔಟ್‌ನಲ್ಲಿ ರಾಜಕಾಲುವೆ ನೀರು

"ಮಹದೇವಪುರ ವಲಯದಲ್ಲಿ ಒಂದು ಗಂಟೆಯಲ್ಲಿ 70 ಮಿ ಮೀ ಗೂ ಹೆಚ್ಚಿನ ಸಮಯ ಮಳೆ ಬಂದರೆ, ರಾಜಕಾಲುವೆಗಳಲ್ಲಿ ಒಳಹರಿವು ಹೆಚ್ಚಾಗುತ್ತದೆ. ಹಿಗಾಗೀ, ಮಳೆ ನೀರು ಬಡಾವಣೆಗಳಿಗೆ ನುಗ್ಗಿದೆ. ರಾಜಕಾಲುವೆಗಳ ದುಃಸ್ಥಿತಿಯಿಂದ ಹೀಗಾಗಿದೆ. ರಾಜಕಾಲುವೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ" ಎಂದು ಈ ದಿನ.ಕಾಮ್‌ಗೆ ವಲಯ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ತಿಳಿಸಿದರು.

ವಾಹನ ಸಂಚಾರ ಸಮಸ್ಯೆ

ಬೆಂಗಳೂರಿನಲ್ಲಿ ಮಳೆಯಾದರೆ, ಮೊದಲು ಎದುರಾಗುವ ಸಮಸ್ಯೆಯೇ ವಾಹನ ಸಂಚಾರ ದಟ್ಟಣೆ. ನಗರದ ಆನಂದ ರಾವ್ ಸರ್ಕಲ್, ವಿಜಯನಗರ, ಮೆಜೆಸ್ಟಿಕ್, ರಾಜರಾಜೇಶ್ವರಿ ನಗರ, ಕೇಂಗೇರಿ ಸೇರಿದಂತೆ ಹಲವೆಡೆ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ಎಲ್ಲೆಲ್ಲಿ ಎಷ್ಟು ಮಳೆ? 

ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ 4.5 ಸೆಂ.ಮೀ ಮಳೆಯಾಗಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.39 ಸೆಂ.ಮೀ., ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 1.5 ಸೆಂ.ಮೀ. ಮಳೆಯಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್