ಮಾನವ ಕಳ್ಳಸಾಗಣೆ ಜಾಲ ಬೇದಿಸಿದ ಸಿಸಿಬಿ: 95 ಯುವತಿಯರ ರಕ್ಷಣೆ

Human trafficking
  • ʼಮಹಿಳಾ ಕಳ್ಳಸಾಗಾಣಿಕೆ ಜಾಲʼ ಬೇದಿಸಿದ ಸಿಸಿಬಿ ʼಮಹಿಳಾ ಸುರಕ್ಷಾ ತಂಡʼ
  • ರಾಜ್ಯ, ಹೊರರಾಜ್ಯದ ಏಳು ಅರೋಪಿಗಳ ಬಂಧನ
  • ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ವಂಚನೆ

ಸಿನಿಮಾ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ, ಯುವತಿಯರನ್ನು ಕಳ್ಳ ಸಾಗಣೆ ಮೂಲಕ ವಿದೇಶಗಳಿಗೆ ರವಾನಿಸುತ್ತಿದ್ದ ಅಂತಾರಾಜ್ಯ ಮಾನವ ಕಳ್ಳಸಾಗಣೆ ಜಾಲವನ್ನು ಸಿಸಿಬಿ ಪೊಲೀಸರು ಬೇದಿಸಿದ್ದು, ಪ್ರಮುಖ ಏಳು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತಾ, “ರಾಜ್ಯ ಮತ್ತು ಹೊರರಾಜ್ಯದ 7 ಆರೋಪಿಗಳು ಸಂಘಟಿತರಾಗಿ ಮಹಿಳಾ ಕಳ್ಳ ಸಾಗಣೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, 95 ಯುವತಿಯರನ್ನು ಜಾಲದಿಂದ ರಕ್ಷಿಸಲಾಗಿದೆ” ಎಂದರು.

ಕೊಪ್ಪಳ ಮೂಲದ ಬಸವರಾಜು ಶಂಕರಪ್ಪ ಕಳಸದ (47), ಮೈಸೂರಿನ ನಜರಬಾದ್‌ನ ಆದರ್ಶ್ ಅಲಿಯಾಸ್ ಆದಿ (27), ತಮಿಳುನಾಡಿನ ರಾಜೇಂದ್ರ ನಾಚಿ (37), ಮಾರಿಯಪ್ಪನ್ (44), ಟಿ. ಅಶೋಕ್ (29), ಬೆಂಗಳೂರು ಜೆ.ಪಿ. ನಗರದ ಆರ್.ಚಂದು (20), ಎಸ್. ರಾಜೀವ್‌ಗಾಂಧಿ (35) ಬಂಧಿತರು. 

ಸಿಸಿಬಿ ʼಮಹಿಳಾ ಸುರಕ್ಷಾ ತಂಡʼ ಮಾನವ ಕಳ್ಳಸಾಗಣೆ ಜಾಲವನ್ನು ಬೇಧಿಸಿದ್ದು, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯದ ಮಹಿಳೆಯರನ್ನ ಕಳ್ಳಸಾಗಣೆ ಮಾಡಿ, ದುಬೈನಲ್ಲಿ ಅವರನ್ನು ಮಾರಾಟ ಮಾಡಿ ಶೋಷಣೆ ನಡೆಸಲಾಗುತ್ತಿತ್ತು ಎಂದು ವಿವರಿಸಿದ್ದಾರೆ.

ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿ, ಪ್ರಮುಖ ಆರೋಪಿ ಸೇರಿ 7 ಜನರನ್ನು ಬಂಧಿಸಲಾಗಿದೆ. 95 ಜನ ಯುವತಿಯರನ್ನು ಬೇರೆ ಕಡೆ ಸಾಗಿಸಲಾಗುತ್ತಿತ್ತು. ಅವರನ್ನು ರಕ್ಷಣೆ ಮಾಡಲಾಗಿದೆ. ಸಿನಿಮಾ, ಧಾರವಾಹಿಗಳಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಆಮಿಷ ಹೊಡ್ಡಿ ಬೇರೆ ದೇಶಗಳಿಗೆ ರವಾನಿಸಿದ್ದಾರೆ ಎಂದು ರಮಣ್‌ ಗುಪ್ತಾ ಹೇಳಿದ್ದಾರೆ.

ಇದನ್ನು ಓದಿದ್ದೀರಾ?: ಜೀವ ಬೆದರಿಕೆ| ಗೃಹ ಸಚಿವರೇ ಬೇಜವಾಬ್ದಾರಿ ಹೇಳಿಕೆ ನೀಡುವಾಗ ಬೆದರಿಕೆ ಸಹಜ ಎಂದ ಕುಂವೀ

ಈವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿ ನಡೆಸುವ ನೆಪದಲ್ಲಿ ಯುವತಿಯರು ಹಾಗೂ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ತಮ್ಮ ಸಂಪರ್ಕಕ್ಕೆ ಬಂದ ಮಹಿಳೆಯರನ್ನು ಬಲವಂತವಾಗಿ ಕ್ಲಬ್‌ಗಳಲ್ಲಿ ನರ್ತಿಸುವಂತೆ, ಹೇಳಿದವರ ಜತೆಗೆ ಸ್ನೇಹ ಬೆಳೆಸುವಂತೆ ಒತ್ತಾಯ ಮಾಡುತ್ತಿದ್ದರು. ನಟಿಯರಾಗಲು ಬಯಸುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಗಳು ವೃತ್ತಿಯಲ್ಲಿ, ಸಿನಿಮಾ, ಧಾರವಾಹಿಗಳಿಗೆ ಸಹನಟ-ನಟಿಯರನ್ನು ಪೂರೈಕೆ ಮಾಡುವವರಾಗಿದ್ದಾರೆ ಎಂದು ಹೇಳಿದ್ದಾರೆ.

ಸಂತ್ರಸ್ತರಿಂದ 50 ಸಾವಿರದಿಂದ 75 ಸಾವಿರ ಹಣ ಪಡೆದುಕೊಂಡು ಪಾಸ್‌ಪೋರ್ಟ್ ಮಾಡಿಸಿ, ವಿದೇಶಗಳಿಗೆ ಕರೆದೊಯ್ಯುತ್ತಿದ್ದರು. ಆರೋಪಿಗಳಿಂದ 17 ಪಾಸ್‌ಪೋರ್ಟ್‌, 7 ಮೊಬೈಲ್ ಪೋನ್, 1 ಲ್ಯಾಪ್‌ಟಾಪ್, 106,800/- ರೂಪಾಯಿ (ಒಂದು ಲಕ್ಷ ಆರು ಸಾವಿರ ಎಂಟುನೂರು ರೂ.) ನಗದನ್ನು ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್