- ಅಪ್ರಾಪ್ತನ ಕುರಿತು ಬಾಲಪರಾಧ ಮಂಡಳಿಗೆ ವರದಿ ಸಲ್ಲಿಸಿರುವ ಪೊಲೀಸ್
- ಗೂಗಲ್‌ನಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ಇ-ಮೇಲ್ ಪತ್ತೆ ಹಚ್ಚಿದ್ದ ಬಾಲಕ
ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆ ಬಳಿ ಇರುವ ನ್ಯಾಷನಲ್ ಪಬ್ಲಿಕ್ ಶಾಲೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದವನನ್ನು ಬಸವೇಶ್ವರ ನಗರದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, "ಬಾಂಬ್ ಬೆದರಿಕೆ ಸಂದೇಶ ಕಳಿಸಿರುವುದು ಬೇರೆ ಶಾಲೆಯ ಅಪ್ರಾಪ್ತ ಬಾಲಕ" ಎಂದು ಹೇಳಿದ್ದಾರೆ.
ಸದ್ಯ ಬಾಲಪರಾಧ ಮಂಡಳಿಗೆ ವಿದ್ಯಾರ್ಥಿಯ ಕುರಿತು ವರದಿ ಕಳಿಸಿದ್ದು, ವಿಚಾರಣೆ ನಡೆಸುವಂತೆ ಹೇಳಲಾಗಿದೆ. ವಿದ್ಯಾರ್ಥಿ ಅಪ್ರಾಪ್ತನಾದ ಕಾರಣ ಅವನ ಹೆಸರು ವಿವರ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಶಾಲೆಯಲ್ಲಿ ಬಾಂಬ್ ಭೀತಿ; ಹುಸಿ ಸಂದೇಶ ಎಂದು ಪೊಲೀಸರ ತನಿಖೆಯಿಂದ ಪತ್ತೆ
ಬಾಂಬ್ ಬೆದರಿಕೆ ಹಾಕಿದ್ದ ಅಪ್ರಾಪ್ತ ಬಾಲಕ, ಗೂಗಲ್‌ನಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯ ಇ-ಮೇಲ್ ಹುಡುಕಾಡಿದ್ದಾನೆ. ನಂತರ, ಬಾಂಬ್ ಹಾಕುವುದಾಗಿ ಬೆದರಿಕೆಯ ಇ-ಮೇಲ್ ಕಳಿಸಿದ್ದಾನೆ. ಮುಂದಾಗುವ ಪರಿಣಾಮದ ಬಗ್ಗೆ ಆತನಿಗೆ ಯಾವುದೇ ಅಂದಾಜಿರಲಿಲ್ಲ ಎಂದು ಹೇಳಿದ್ದಾರೆ.
ಜ.6 ರ ರಾತ್ರಿ ಬಾಂಬ್ ಬೆದರಿಕೆಯ ಇ ಮೇಲ್ ಬಂದಿತ್ತು. ಶಾಲೆಯ ಆಡಳಿತ ಮಂಡಳಿ ಮುಂಜಾನೆ 11 ಕ್ಕೆ ಇಮೇಲ್ ವೀಕ್ಷಿಸಿದ್ದಾರೆ. ಇಮೇಲ್‌ನಲ್ಲಿ ಕ್ಯಾಂಪಸ್‌ನಲ್ಲಿ ನಾಲ್ಕು ಜಿಲೆಟಿನ್ ಸ್ಟಿಕ್‌ಗಳನ್ನು ಇಡಲಾಗಿದ್ದು, ಶುಕ್ರವಾರ ಸ್ಫೋಟಗೊಳ್ಳಲಿದೆ ಎಂದು ಸಂದೇಶ ಕಳುಹಿಸಲಾಗಿತ್ತು. ಪೊಲೀಸರಿಗೆ ಆಡಳಿತ ಮಂಡಳಿ ದೂರು ನೀಡಿತ್ತು. ಆತಂಕದ ಹಿನ್ನೆಲೆಯಲ್ಲಿ 950ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿತ್ತು.
ಶ್ವಾನ ದಳ ಮತ್ತು ಬಾಂಬ್ ಪತ್ತೆದಳ ಶಾಲೆಯ ಮೂಲೆ ಮೂಲೆಯ ಶೋಧ ನಡೆಸಿತ್ತು. ಯಾವುದೇ ಬಾಂಬ್ ಪತ್ತೆಯಾಗದ ನಂತರ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿ ವಾತಾವರಣ ತಿಳಿಗೊಳಿಸಿದ್ದರು.