ಕೃಷ್ಣಾ ಮೇಲ್ದಂಡೆ ಯೋಜನೆ | ಹಿಂಗಾರು ಹಂಗಾಮು ಬೆಳೆಗೆ ನೀರು ಪೂರೈಕೆ: ಸಚಿವ ಸಿ ಸಿ ಪಾಟೀಲ್

meeting-Vidanasouda
  • 119 ದಿನಗಳಿಗೆ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ಸಭೆಯಲ್ಲಿ ತೀರ್ಮಾನ
  • ಲಘು ನೀರಾವರಿ ಬೆಳೆಗಳಿಗೆ ನೀರು; ಭತ್ತ, ಬಾಳೆ, ಕಬ್ಬು ಬೆಳೆಗೆ ನೀರು ನಿಷೇಧ

ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಕ್ಕೆ ಹಿಂಗಾರು ಹಂಗಾಮಿಗೆ ಡಿಸೆಂಬರ್‌ 22ರಿಂದ 2023ರ ಮಾರ್ಚ್‌ 30 ರವರೆಗೆ ನೀರು ಹಾಯಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್‌ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ಕೃಷ್ಣಾ ಮೇಲ್ದಂಡೆ ಯೋಜನೆಯ 2022-23ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯ ಸಭೆ ನಡೆಸಿದ ಅವರು, "14 ದಿನ ಚಾಲು ಹಾಗೂ 10 ದಿನ ಬಂದ್‌ ಪದ್ಧತಿಯನ್ನು ಅನುಸರಿಸಿ ಐದು ಪಾಳಿಯಲ್ಲಿ 69 ದಿನಗಳಿಗೆ ನೀರು ಪೂರೈಸಲಾಗುವುದು. ಇನ್ನೈದು ಪಾಳಿಯಲ್ಲಿ ಬಂದ್‌ ಅನುಸರಿಸಿ ಒಟ್ಟಾರೆ 119 ದಿನಗಳಿಗೆ ಹಿಂಗಾರು ಹಂಗಾಮಿಗೆ ನೀರು ಪೂರೈಸಲು" ಸೂಚನೆ ನೀಡಿದ್ದಾರೆ.

"ನ.24 ರಿಂದ ಡಿಸೆಂಬರ್‌ 11 ರವರೆಗೂ ಹಿಂಗಾರು ಹಂಗಾಮಿಗೆ ಬಿತ್ತನೆ ಕಾರ್ಯವನ್ನು ಏಕ ಕಾಲಕ್ಕೆ ಕೈಗೊಳ್ಳಲು ರೈತ ಸಮುದಾಯಕ್ಕೆ ಮಾಹಿತಿ ನೀಡಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆಯ ಬೆಳೆ ಪದ್ಧತಿ ಅನುಸಾರವಾಗಿ ಅಚ್ಚುಕಟ್ಟು ಪ್ರದೇಶದ ಶೇ.50ರಷ್ಟು ಕ್ಷೇತ್ರಕ್ಕೆ ಲಘು ನೀರಾವರಿ ಬೆಳೆಗಳಿಗೆ ಮಾತ್ರ ಹಾಗೂ ಹಾಲಿ ಬೆಳೆದಿರುವ ದ್ವಿಋತು ಬೆಳೆಗಳಿಗೆ ನೀರು ಪೂರೈಸಲಾಗುವುದು" ಎಂದು ಸಚಿವ ಸಿ ಸಿ ಪಾಟೀಲ್‌ ಮಾಹಿತಿ ನೀಡಿದ್ದಾರೆ.

"ಕಬ್ಬು, ಭತ್ತ, ಬಾಳೆ ಇತ್ಯಾದಿ ನಿಷೇಧಿತ ಬೆಳೆಗಳನ್ನು ಬೆಳೆಯದಿರಲು ಸೂಚನೆ ನೀಡಲಾಗಿದ್ದು, ಕಡಿಮೆ ನೀರಲ್ಲಿ ಬರುವ ಬೆಳೆಗಳಾದ ಜೋಳ, ಮೆಕ್ಕೆ ಜೋಳ, ಗೋಧಿ, ಸೂರ್ಯಕಾಂತಿ, ಸಾಸಿವೆ, ಕಡಲೆ ಗೆಜ್ಜಿ, ಶೇಂಗಾ ಕುಸುಬಿ, ಸಜ್ಜೆ, ಸೊಪ್ಪು, ತರಕಾರಿ ಇತ್ಯಾದಿಗಳನ್ನು ಮಾತ್ರ ಬೆಳೆಯುವಂತೆ ರೈತರಿಗೆ ಮನವಿ ಮಾಡಲಾಗಿದೆ."

ಈ ಸುದ್ದಿ ಓದಿದ್ದೀರಾ? ಕಬ್ಬು ಬೆಳೆಗೆ ದರ ನಿಗದಿ |ಶುಗರ್ ಮಾಫಿಯಾಕ್ಕೆ ಮಣಿದ ಸರ್ಕಾರ: ಪೊರಕೆ ಚಳವಳಿ ಆಕ್ರೋಶ

"ಕೃಷ್ಣ ಜಲಾಶಯದಲ್ಲಿ ಸದ್ಯ ನೀರಾವರಿಗೆ ಲಭ್ಯವಿರುವ 68.977 ಟಿಎಂಸಿ ನೀರು ಪೋಲಾಗದಂತೆ ಮಿತವಾಗಿ ಬಳಸಿ ಉಳಿತಾಯ ಮಾಡಿದರೆ ಮತ್ತು ಜಲಾಶಯಗಳಿಗೆ ಒಳಹರಿವು ಲಭ್ಯವಾದರೆ ಹಿಂಗಾರು ಹಂಗಾಮಿನ ಅವಧಿಯನ್ನು ನೀರಾವರಿಗೆ ಲಭ್ಯವಿರುವ ನೀರಿನ ಸಂಗ್ರಹಣೆಯ ಅನುಸಾರ ನೀರು ಬಿಡುವ ಅವಧಿಯನ್ನು ವಿಸ್ತರಿಸಲಾಗುವುದು" ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೃಹತ್‌ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಮತ್ತು ಯುಕೆಪಿ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180