ಮಹದೇವಪುರ| ಬಿಬಿಎಂಪಿ ಪೌರಕಾರ್ಮಿಕರ ಗುಡಿಸಲು ಮೇಲೆ ಕುಸಿದ ಸಿಮೆಂಟ್ ಕಾಂಪೌಂಡ್!

  • 15ಕ್ಕೂ ಹೆಚ್ಚು ಗುಡಿಸಲುಗಳಿಗೆ ಹಾನಿ, ಪ್ರಾಣಾಪಾಯ ಇಲ್ಲ
  • ತಾತ್ಕಾಲಿಕ ಪರಿಹಾರ ಮತ್ತು ಖಾಯಂ ಆಶ್ರಯಕ್ಕೆ ಒತ್ತಾಯ

ಪೌರಕಾರ್ಮಿಕರು ವಾಸಿಸುತ್ತಿದ್ದ ಗುಡಿಸಲುಗಳ ಮೇಲೆ ಪಕ್ಕದ ನಿವೇಶನದ ಕಾಂಪೌಡ್‌ ಕುಸಿದು, 15ಕ್ಕೂ ಹೆಚ್ಚು ಶೆಡ್‌ಗಳು ಜಖಂಗೊಂಡಿರುವ ಘಟನೆ ಮಹದೇವಪುರದ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

ಬಿಬಿಎಂಪಿ ಪೂರ್ವ ವಲಯದ ಹೂಡಿ ಬಳಿಯ ಕೊಡಿಗೆಹಳ್ಳಿಯಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಪೌರಕಾರ್ಮಿಕರ ಶೆಡ್‌ಗಳ ಮೇಲೆ ಸಿಮೆಂಟ್ ಕಾಂಪೌಡ್‌ ಕುಸಿದಿದೆ. ಸೋಮವಾರ ಸಂಜೆ ನಾಲ್ಕು ಗಂಟೆಗೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಪಕ್ಕದ ನಿವೇಶನದಲ್ಲಿ ನಡೆಯುತ್ತಿರುವ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಸಿಮೆಂಟ್(ಇಂಟರ್‌ಲಾಕ್) ಕಾಂಪೌಂಡ್ ನಿರ್ಮಿಸಲಾಗಿದ್ದು, ಭೂಮಿ ಮಟ್ಟದಿಂದ ನಾಲ್ಕೈದು ಅಡಿ ಎತ್ತರಕ್ಕೆ ಮಣ್ಣು ತುಂಬಲಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಣ್ಣು ಕುಸಿದು, ಕಾಪೌಂಡ್‌ ಪೌರಕಾರ್ಮಿಕರ ಗುಡಿಸಲುಗಳ ಮೇಲೆ ಬಿದ್ದಿದೆ.

“ಈ ಬಡಾವಣೆಯಲ್ಲಿ ವಾಸವಾಗಿದ್ದ ಪೌರಕಾರ್ಮಿಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಇವರಿಗೆ ಈ ಕೂಡಲೇ ಪರಿಹಾರ ಮತ್ತು ತಾತ್ಕಾಲಿಕ ಆಶ್ರಯವನ್ನು ಕಲ್ಪಿಸಬೇಕು. ಬಿಬಿಎಂಪಿ ನೇರ ಪಾವತಿ ಸಂಭಾವನೆಯಲ್ಲಿ ಕೆಲಸ ಮಾಡುವ ಎಲ್ಲಾ ಪೌರಕಾರ್ಮಿಕರಿಗೆ ಈ ಕೂಡಲೇ ಸ್ವಂತ ಮನೆಗಳನ್ನು ಕೊಡಬೇಕು. 
-ಕ್ಲಿಪ್ಟನ್ ಡಿ ರೊಜಾರಿಯೋ, ರಾಜ್ಯ ಕಾರ್ಯದರ್ಶಿ, ಸಿಪಿಐ(ಎಂಎಲ್) ಲಿಬರೇಷನ್, ಕರ್ನಾಟಕ.

ಕೊಡಿಗೆಹಳ್ಳಿಯ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಖಾಲಿ ನಿವೇಶನದಲ್ಲಿ 70 ಕುಟುಂಬಗಳು ಮಾಸಿಕ ₹1800 ಪಾವತಿಸಿ ಜಾಗ ಪಡೆದುಕೊಂಡಿದ್ದಾರೆ. ಈ ಎಲ್ಲಾ ಕುಟುಂಬಗಳು ಹಲವು ದಶಕಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಈವರೆಗೆ ಈ ಕಾರ್ಮಿಕರಿಗೆ ಯಾವುದೇ ಗುರುತಿನ ಚೀಟಿ, ಪಡಿತರ ಚೀಟಿ ನೀಡಿಲ್ಲ.

Image

ಖಾಲಿ ನಿವೇಶನಕ್ಕೆ ಮಾತ್ರ ₹1800 ಬಾಡಿಗೆ ಪಡೆಯುವ ನಿವೇಶನ ಮಾಲೀಕರು, ಸಂಜೆ ಆರರಿಂದ ಬೆಳಗ್ಗೆ ಐದರವರೆಗೆ ಮಾತ್ರ ಗುಡಿಸಲುಗಳಿಗೆ ವಿದ್ಯುತ್ ನೀಡುತ್ತಾರೆ. ಇಲ್ಲಿ ವಾಸಿಸುತ್ತಿರುವ 70 ಕುಟುಂಬಗಳ 200ಕ್ಕೂ ಹೆಚ್ಚು ಜನ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ. ವಾರಕ್ಕೊಮ್ಮೆ ಮಾತ್ರ ಕುಡಿಯುವ ನೀರು ಕೊಡುತ್ತಾರೆ ಎಂದು ಅಲ್ಲಿನ ನಿವಾಸಿಯೊಬ್ಬರು ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ. 

15ಕ್ಕೂ ಹೆಚ್ಚು ಗುಡಿಸಲುಗಳಿಗೆ ಹಾನಿ

ಸೋಮವಾರ ಸಂಜೆ ಪೌರಕಾರ್ಮಿಕರೆಲ್ಲಾ ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಕಾಪೌಂಡ್ ಕುಸಿದಿದ್ದು, 15 ಗುಡಿಸಲುಗಳಿಗೆ ಹಾನಿಯಾಗಿದೆ. ಸಂಜೆ ನಾಲ್ಕು ಗಂಟೆಗೆ ಘಟನೆ ಸಂಭವಿಸಿದ್ದು, ಸ್ವತಃ ಪೌರಕಾರ್ಮಿಕರೇ ಕುಸಿದಿದ್ದ ಗೋಡೆಯನ್ನು ತೆರವುಗೊಳಿಸಿದ್ದಾರೆ. 

ಘಟನೆ ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಸಿಪಿಐ (ಎಂಎಲ್) ಸಂಘಟನೆಯ ಮುಖಂಡರು, ಬಿಬಿಎಂಪಿ ವಲಯ ಜಂಟಿ ಆಯುಕ್ತರ ಗಮನಕ್ಕೆ ತಂದು ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಮಳೆ ಹಾನಿ ಪರಿಹಾರ ನೀಡುವುದರ ಜತೆಗೆ, ಬಹಳ ದಿನಗಳ ಬೇಡಿಕೆಯಾದ ಸ್ವಂತ ಮನೆಗಳನ್ನು ಪೌರಕಾರ್ಮಿಕರಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.

Image

ಘಟನೆ ಸಂಬಂಧ ಈ ದಿನ.ಕಾಮ್ ಜತೆಗೆ ಮಾತನಾಡಿದ ಅಲ್ಲಿನ ನಿವಾಸಿ ಬಾಲರಾಜ್, “ನಾವು ವಾಸಿಸುವ 15ಕ್ಕೂ ಹೆಚ್ಚಿನ ಶೆಡ್‌ಗಳ ಮೇಲೆ ಕಾಂಪೌಂಡ್ ಕುಸಿದಿದೆ. ನಾವು ಮೂಲತಃ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯವರಾಗಿದ್ದು, ಹಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು

“ತಿಂಗಳಿಗೆ 1800 ರೂಪಾಯಿ ಬಾಡಿಗೆ ನೀಡುವ ಷರತ್ತಿನೊಂದಿಗೆ ಜಾಗ ಪಡೆದುಕೊಂಡು ಶೆಡ್ ನಿರ್ಮಿಸಿಕೊಂಡಿದ್ದೇವೆ. ರಾತ್ರಿ ಮಾತ್ರ ವಿದ್ಯುತ್ ಸಂಪರ್ಕ ನೀಡುತ್ತಾರೆ. ವಾರಕ್ಕೊಮ್ಮೆ ಮಾತ್ರ ಜಾಗದ ಮಾಲೀಕರು ನೀರು ಕೊಡುತ್ತಾರೆ. ನಮಗೆ ಯಾವುದೇ ಗುರುತಿನ ಚೀಟಿ ನೀಡಿಲ್ಲ” ಎಂದು ಬಾಲರಾಜ್ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್