ಮಾವು ಪ್ರಿಯರಿಗೆ ಸಿಹಿಸುದ್ದಿ| ಎರಡು ವರ್ಷಗಳ ಬಳಿಕ ಶೀಘ್ರದಲ್ಲೇ ನಡೆಯಲಿದೆ ’ಮಾವು ಮೇಳ’

  • ಕೋವಿಡ್ ಸಾಂಕ್ರಾಮಿಕದಿಂದ ಎರಡು ವರ್ಷ ರದ್ದಾಗಿದ್ದ ಮಾವು ಮೇಳ
  • ಮೇ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರ ಮೇಳ ಆಯೋಜನೆ

ಕೋವಿಡ್-19 ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಾವಿನ ಮೇಳವನ್ನು ಈ ವರ್ಷ ನಡೆಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ. 

ಇದೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲವಾರ ಲಾಲ್‌ಬಾಗ್‌ ಸಸ್ಯಕಾಶಿಯಲ್ಲಿ ಮಾವಿನ ಮೇಳವನ್ನು ಆಯೋಜಿಸಲಾಗುವುದು ಎಂದು ಕರ್ನಾಟಕ ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.

"ಅಲ್ಫೋನ್ಸೋ, ರಸಪುರಿ, ತೋತಾಪುರಿ, ಆಮ್ರಪಲ್ಲಿ ಮತ್ತು ಮಲ್ಲಿಕಾ ಸೇರಿದಂತೆ ಎಂಟರಿಂದ ಹತ್ತು ಬಗೆಯ ಮಾವುಗಳನ್ನು ಮೇಳದಲ್ಲಿ ಪ್ರದರ್ಶಿಸುವ ನಿರೀಕ್ಷೆಯಿದೆ. ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಲಾಲ್‌ಬಾಗ್‌ ಮತ್ತು ಕಬ್ಬನ್ ಪಾರ್ಕಿನಲ್ಲಿ ಮಾವಿನ ಮೇಳವನ್ನು ಆಯೋಜಿಸಲಾಗುತ್ತದೆ. ಜನರಿಂದ ಉತ್ತಮ ಸ್ಪಂದನೆ ಸಿಗಬಹುದೆಂಬ ನಿರೀಕ್ಷೆ ಇದೆ. ಮೇ ತಿಂಗಳ ಎರಡನೇ ವಾರದಲ್ಲಿ ಜಿಲ್ಲಾವಾರು ಮಾವಿನ ಮೇಳ ನಡೆಯಲಿದೆ" ಎಂದು ತಿಳಿಸಿದರು.

"ಮೇಳದಲ್ಲಿ ರೈತರಿಂದ ನೇರವಾಗಿ ಗ್ರಾಹಕರು ರಾಸಾಯನಿಕ ರಹಿತ ಹಣ್ಣುಗಳನ್ನ ಖರೀದಿಸಬಹುದಾಗಿದೆ. ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಅವಕಾಶ ಮಾಡಿಕೊಟ್ಟಿದ್ದು, ಗ್ರಾಹಕರು ನೈಸರ್ಗಿಕ ಮತ್ತು ತಾಜಾ ಹಣ್ಣುಗಳನ್ನು ಇಲ್ಲಿ ಕೊಳ್ಳಬಹುದು" ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ. 

ಇದನ್ನು ಓದಿದ್ದೀರಾ?: ಪಿಎಸ್ಐ ನೇಮಕಾತಿ ಹಗರಣ| ಅಕ್ರಮದ ‘ಹಾಟ್‌ಸ್ಪಾಟ್’ ಆಗಿತ್ತಾ ಬೆಂಗಳೂರು?

ಈ ವರ್ಷ ಇಳುವರಿ ಕುಂಠಿತ

ಕಳೆದ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಿದ್ದರಿಂದ, ಮಾವಿನ ಹೂವುಗಳು ಉತ್ತಮವಾಗಿಲ್ಲ. ಪರಿಣಾಮವಾಗಿ, ಈ ವರ್ಷ ರಾಜ್ಯದಲ್ಲಿ ಮಾವಿನ ಉತ್ಪಾದನೆ ಕುಸಿತ ಕಂಡಿದೆ. ಆದರೂ ರೈತರಿಗೆ ನೆರವಾಗುವ ಉದ್ದೇಶದಿಂದ ಮೇಳ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮೇಳದಲ್ಲಿ ಯಾವ-ಯಾವ ಮಾವು ಸಿಗಲಿವೆ? 

ಮಾವು ಮೇಳದಲ್ಲಿ ಹೆಚ್ಚಾಗಿ ಬೇನಿಶಾ, ತೋತಾಪುರಿ, ರಸಪೂರಿ, ಕೇಸರ್, ಮಲ್ಲಿಕಾ, ಮಲ್ಗೋವಾ, ಆಪೂಸು, ಖಾದರ, ಪುನಾಸ್, ಆಮ್ಲೆಟ್, ಸುವರ್ಣರೇಖಾ, ಚಿನ್ನರಸ, ಪೆದ್ದರಸ, ಲಡ್ಡು ಮುಂತಾದ ತಳಿಯ ಹಣ್ಣುಗಳು ಲಭ್ಯವಾಗಲಿವೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವಿನ ಹಣ್ಣುಗಳು ಖರೀದಿ ಮಾಡಬಹುದು. ದೇಶದ ಬೇರೆ-ಬೇರೆ ರಾಜ್ಯದ ಮಾವುಗಳೂ ಮೇಳದಲ್ಲಿ ಸಿಗಲಿದ್ದು ವಿವಿಧ ಬಗೆಯ ಹಣ್ಣುಗಳನ್ನು ಗ್ರಾಹಕರು ರೈತರಿಂದ ನೇರವಾಗಿ ಖರೀದಿಸಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್