
ಮುಸ್ಲಿಮರ ಮಸೀದಿಯ ಒಳಗಡೆ ಏನಿದೆ? ಆಝಾನ್ ಯಾಕೆ ಕೊಡುತ್ತಾರೆ? ನಮಾಝ್ ಯಾಕೆ ಮತ್ತು ಹೇಗೆ ಮಾಡುತ್ತಾರೆ? ಎಂಬಿತ್ಯಾದಿ ಪ್ರಶ್ನೆಗಳು ಇತರೆ ಧರ್ಮೀಯರಿಗೆ ಪ್ರತಿನಿತ್ಯ ಕಾಣುವ ಮಸೀದಿಯನ್ನು ನೋಡುವಾಗ ಕಾಡಿರಬಹುದು.
ಇದಕ್ಕೆಲ್ಲ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲಾಲ್ ಮಸೀದಿಯು "ಮಸೀದಿ ದರ್ಶನ: ಮಸೀದಿಯಲ್ಲಿ ಏನಿದೆಯೆಂದು ಅರಿಯೋಣ ಬನ್ನಿ" ಎಂಬ ಕಾರ್ಯಕ್ರಮದ ಮೂಲಕ ಅವಕಾಶ ಕಲ್ಪಿಸಿತ್ತು. ಕಾರ್ಯಕ್ರಮವನ್ನು ಮುಸ್ಲಿಂ ಸಂಘಟನೆಯೊಂದು ಆಯೋಜಿಸುವ ಮೂಲಕ ಮಸೀದಿಯ ಬಗ್ಗೆ ಸಮಾಜದಲ್ಲಿ ಹರಿದಾಡಿರುವ 'ಕಪೋಲಕಲ್ಪಿತ ಸುದ್ದಿಗಳೆಲ್ಲ ಸುಳ್ಳು' ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಯಿತು.
ಮಸೀದಿ ಎಂದರೆ ಮುಸಲ್ಮಾನರಿಗೆ ಪ್ರಾರ್ಥನಾ ಮಂದಿರ ಮತ್ತು ಅದು ಅವರ ಧಾರ್ಮಿಕ ಕೇಂದ್ರ. ಹೊರಗಿನವರಿಗೆ ಹಲವು ಕುತೂಹಲ, ಗೊಂದಲ ಹಾಗೂ ಅನುಮಾನಗಳ ಗೂಡಾಗಿತ್ತು.
"ಮಸೀದಿಯೊಳಗೆ ಶಸ್ತ್ರಾಸ್ತ್ರಗಳ ಸಂಗ್ರಹಾಗಾರ ಇರುತ್ತದೆ, ಇತರೆ ಧರ್ಮಗಳನ್ನು ಅವಹೇಳನ ಮಾಡಲಾಗುತ್ತದೆ, ಸಮಾಜಘಾತುಕರನ್ನು ಪೋಷಿಸುವ ಕೇಂದ್ರ. ಮಹಿಳೆಯರಿಗೆ ಅವಕಾಶವಿಲ್ಲ" ಹೀಗೆ ಹಲವು ಆರೋಪ, ಊಹಾಪೋಹಗಳು ಮಸೀದಿ ಹೆಸರಲ್ಲಿ ಓಡಾಡಿವೆ, ಅವು ಇಂದಿಗೂ ಸುಳಿದಾಡುತ್ತಿವೆ.
ಇದೆಲ್ಲವನ್ನೂ ಬೆಂಗಳೂರಿನ ಜಮಾತೆ ಇಸ್ಲಾಮಿ ಹಿಂದ್ ಜಯನಗರ ಘಟಕ ಸುಳ್ಳಾಗಿಸಲು ಮುಂದಾಗಿದ್ದು, ಪರಸ್ಪರ ಅನ್ಯಧರ್ಮೀಯರೊಂದಿಗೆ ನಾವೆಲ್ಲ ಒಂದು, ಮಸೀದಿಯೊಳಗೆ ಏನಿದೆ ನೋಡ ಬನ್ನಿ ಎಂದು ಮುಕ್ತ ಆಹ್ವಾನ ನೀಡಿ ಸಾರ್ವಜನಿಕರಿಗೆ ಮಸೀದಿ ದರ್ಶನ ಮಾಡಿಸಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿತ್ತು.
ಮುಕ್ತ ಆಹ್ವಾನಕ್ಕೆ ಅಷ್ಟೇ ನಿರ್ಮಲವಾದ, ಕುತೂಹಲವಾದ, ಸೌಹಾರ್ದ ಮನಸ್ಸಿನಿಂದ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಧರ್ಮ, ಜಾತಿ-ಪಂಥಗಳನ್ನೆಲ್ಲ ಮರೆತು ಜನರು ಆಗಮಿಸಿದ್ದರು. ಮಾತ್ರವಲ್ಲ, ಮಸೀದಿ ಬಗ್ಗೆ ತಮಗಿದ್ದ ಅನುಮಾನಗಳು, ಪ್ರಶ್ನೆಗಳಿಗೆಲ್ಲ ಉತ್ತರ ಪಡೆದುಕೊಂಡರು.
ಈ ಮಸೀದಿ ದರ್ಶನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಚಿಂತಕ ಡಾ ಕೆ ಮರಳುಸಿದ್ದಪ್ಪ, "ಅನ್ಯ ಜಾತಿ, ಧರ್ಮಗಳ ನಡುವಿನ ಸೌಹಾರ್ದ ಸಮ್ಮಿಲನವಾಗುವ ಸಮಯಕ್ಕೆ ಮಸೀದಿ ದರ್ಶನ ಕಾರ್ಯಕ್ರಮ ಸಾಕ್ಷಿಯಾಗಿದೆ. ನನ್ನ ಬಹುದಿನಗಳ ಆಸೆ ಈಡೇರಿದೆ. ಹಿಂದುತ್ವ, ಹಿಂದೂ ಧರ್ಮ ಎನ್ನುವುದರಲ್ಲೇ ನೂರೆಂಟು ಜಾತಿಗಳಿವೆ. ಬೇರೆ-ಬೇರೆ ಧರ್ಮ ಜಾತಿಗಳ ನಡುವೆ ಶಾಂತಿ, ಸಮಾನತೆಯ ಸಾರವನ್ನು ಅಗತ್ಯವಾಗಿ ಹರಡಬೇಕಿದೆ" ಎಂದು ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮದ ಉದ್ದೇಶದ ಕುರಿತು ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, "ಇಡೀ ಪ್ರಪಂಚದ ಮಸೀದಿಗಳಲ್ಲೆಲ್ಲ ಪ್ರಾರ್ಥನೆ ಒಂದೇ ರೀತಿಯಲ್ಲಿ ನಡೆಯುತ್ತದೆ. ಮಸೀದಿ ಕುರಿತು ಇರುವ ಗೊಂದಲ ಮತ್ತು ಆರೋಪಗಳು ಸುಳ್ಳೆಂದು ನಿರೂಪಿಸುವ ಹಾಗೂ ಸಹೋದರತೆ, ಬಾಂಧವ್ಯದಿಂದ ಧರ್ಮದ ನೈಜ ಸಾರವನ್ನು ತಿಳಿದು ಪರಸ್ಪರ ಅರಿತು, ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ" ಎಂದರು.
"ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ, ಆರಂಭವಷ್ಟೇ. ಮುಂದಿನ ದಿನಗಳಲ್ಲೂ ಇಷ್ಟೇ ಆತ್ಮೀಯತೆಯಿಂದ ಸರ್ವ ಧರ್ಮೀಯರು ಮಸೀದಿಯೊಳಗೆ ನಿರಾತಂಕವಾಗಿ, ಮುಕ್ತವಾಗಿ ಬರಬಹುದು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಬರುವಂತಾಗಬೇಕೆಂಬ ಉದ್ದೇಶವಿದೆ. ಇದೇ ಮಾದರಿಯಲ್ಲಿ ರಾಜ್ಯದೆಲ್ಲೆಡೆ ಮಸೀದಿಗೆ ಸಾರ್ವಜನಿಕರ ಮುಕ್ತವಾಗಿ ಆಹ್ವಾನಿಸಲಾಗುವುದು" ಎಂದು ಅಕ್ಬರ್ ಅಲಿ ತಿಳಿಸಿದರು.

ನಮಾಝ್ ಎಂದರೇನು, ಮಸೀದಿ ಗೋಡೆ ಮೇಲಿನ ಅರೇಬಿಕ್ ಸಾಲುಗಳ ಅರ್ಥ, ಗೋಪುರದ ರೂಪುರೇಷೆ, ನಿತ್ಯದ ಐದು ಬಾರಿಯ ಪ್ರಾರ್ಥನೆಯ ವಿಧಾನ, ಶುಕ್ರವಾರದ ವಿಶೇಷ ಪ್ರಾರ್ಥನೆಯ ಸಾರ, ಮುಹಮ್ಮದ್ ಪೈಗಂಬರ್ ಅವರ ಕುರಿತ ವಿಶೇಷ ಮಾಹಿತಿಯನ್ನು ಮಸೀದಿಗೆ ಭೇಟಿ ನೀಡಿದ ಸುಮಾರು 500ಕ್ಕೂ ಹೆಚ್ಚು ಇತರೆ ಧರ್ಮೀಯರಿಗೆ ಆತ್ಮೀಯತೆಯಿಂದ ವಿವರಿಸಿದರು.
ಮಸೀದಿಯ ಕಾರ್ಯವೈಖರಿಯ ಕುರಿತು ಜಮಾಅತೆ ಇಸ್ಲಾಮೀ ಹಿಂದ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಮುಹಮ್ಮದ್ ನವಾಝ್ ಸೇರಿದಂತೆ ಇತರರು ಮಸೀದಿಗೆ ಭೇಟಿ ನೀಡಿದ ಇತರೆ ಧರ್ಮೀಯರಿಗೆ ಕನ್ನಡದಲ್ಲೇ ಅಚ್ಚುಕಚ್ಚಾಗಿ ತಿಳಿಸಿ ಕೊಡುವುದರೊಂದಿಗೆ, ವುಝೂ(ಅಂಗ ಸ್ನಾನ) ಎಂದರೆ ಏನು? ಆಝಾನಿನಲ್ಲಿ ಹೇಳಲಾಗುವ ವಾಕ್ಯಗಳ ಅರ್ಥವೇನು ಎಂದು ಆಸಕ್ತರು ಕೇಳಿದ ಎಲ್ಲ ಪ್ರಶ್ನೆಗಳಿಗೂ ವಿನಮ್ರತೆಯಿಂದಲೇ ಉತ್ತರಿಸುತ್ತಿದ್ದರು.
ಜಯನಗರದ ಕಾರ್ಮಲ್ ಕಾರ್ನ್ವೆಂಟ್ ಹೈಯರ್ ಪ್ರೈಮರಿ ಶಾಲೆಯ ಮುಖ್ಯ ಶಿಕ್ಷಕಿ, ಸಿಸ್ಟರ್ ಸಾಧನಾ ಈ ದಿನ. ಕಾಮ್ಗೆ ಮಸೀದಿ ದರ್ಶನ ಕುರಿತು ಪ್ರತಿಕ್ರಿಯೆ ನೀಡಿ, "ಮಸೀದಿ ಮುಂದೆ ಹೋಗುವಾಗೆಲ್ಲ ಒಮ್ಮೆಯಾದರೂ ನೋಡಬೇಕೆಂಬ ಆಸೆ ಇತ್ತು. ಅದು ಇಂದು ಕೊನೆಗೂ ಈಡೇರಿದೆ. ಸಂಘಟಕರಿಗೆ ಧನ್ಯವಾದ" ಎಂದು ಹರ್ಷದಿಂದಲೇ ನುಡಿದರು.

ವಿಧಿವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿರುವ ಮಾರುತಿ ನಗರದ ಚಂದ್ರಿಕಾ ಅವರು ಈದಿನ.ಕಾಮ್ನೊಂದಿಗೆ ತಮ್ಮ ಅನುಭವ ಹಂಚಿಕೊಂಡು, "ಚಿಕ್ಕಂದಿನಿಂದಲೂ ಮಸೀದಿಯೊಳಗೆ ಹೋಗಬೇಕು, ನೋಡಬೇಕೆಂಬ ಆಸೆಯಿತ್ತು. ಇಂದು ಅದು ಈಡೇರಿದೆ. ಒಟ್ಟಾರೆ ಎಲ್ಲ ಧರ್ಮಗಳ ಸಾರ ಒಂದೇ. ಯಾರಿಗೂ ಮೋಸ, ಅನ್ಯಾಯ ಮಾಡದೆ ಪ್ರೀತಿ-ವಿಶ್ವಾಸಗಳಿಂದ ಬದುಕು, ಮನುಷ್ಯರೊಂದಿಗೆ ಮಾನವೀಯತೆಯಿಂದ ಜೀವಿಸಿ ಎಂಬುದಾಗಿದೆ. ಮಹಮ್ಮದ್ ಪೈಗಂಬರ್ ಅದನ್ನು ಅರ್ಥಪೂರ್ಣವಾಗಿ ಹೇಳಿದ್ದಾರೆ. ಮಸೀದಿ ವೀಕ್ಷಣೆ ಮಾಡುವಾಗ ಪ್ರಾರ್ಥನೆಯ ಎಲ್ಲ ವಿಧಾನಗಳನ್ನು ಸಹಜ, ಸರಳವಾಗಿ ವಿವರಿಸಿದರು" ಎಂದರು.

ಮಸೀದಿ ವಿಕ್ಷಣೆಗೆ ಬಂದಿದ್ದ ವಕೀಲ ವಿನಯ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, "ಮುಸ್ಲಿಂ ಸಮುದಾಯದ ಬಗ್ಗೆ, ಹಿಜಾಬ್, ಬುರ್ಕಾ, ಹಲಾಲ್, ಪ್ರಾರ್ಥನೆಯ ಸಾಲುಗಳಲ್ಲಿ ಭಯೋತ್ಪಾದನೆಗೆ ಪ್ರಚೋದಿಸುವ ಅಂಶಗಳಿವೆ. ಹೀಗೆ ಹಲವಾರು ಆರೋಪಗಳನ್ನು ಮಾಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕಿದೆ. ರಾಜಕೀಯ ಹುಚ್ಚಾಟಕ್ಕೆ ಸಾಮಾಜಿಕ ಅಶಾಂತಿ ಉಂಟು ಮಾಡಿ ಧರ್ಮಗಳ ನಡುವೆ ಕೋಮುಗಲಭೆಗಳನ್ನು ಮಾಡಿಸುವವರಿಗೆ ಇದೊಂದು ಪಾಠ. ಇನ್ನಾದರೂ ಅದೆಲ್ಲವನ್ನು ಬಿಟ್ಟು ಜನರನ್ನು ಸೌಹಾರ್ದತೆಯಿಂದ ಬದುಕಲು ಬಿಡಬೇಕು" ಎಂದು ಅಭಿಪ್ರಾಯಪಟ್ಟರು.

ಬಿಲಾಲ್ ಮಸೀದಿಯಲ್ಲಿ ನಡೆದ ನಮಾಝಿನಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು, ಕಿರಿಯರು ಎಲ್ಲರೂ ಭಾಗವಹಿಸಿದ್ದರು. ಪಶ್ಚಿಮಾಭಿಮುಖವಾಗಿ (ಕಿಬ್ಲಾ) ಕುಳಿತು ಸಾಮೂಹಿಕವಾಗಿ ಸಾಷ್ಟಾಂಗ ಸಲ್ಲಿಸುವಾಗ ಮಸೀದಿಯಲ್ಲಿ ನೆರೆದಿದ್ದ ಹಿಂದೂ ಧರ್ಮ ಸೇರಿದಂತೆ ಇತರೆ ಧರ್ಮಗಳ ಜನರು ನಿಶ್ಶಬ್ದತೆಯನ್ನು ಕಾಯ್ದುಕೊಂಡದ್ದು ವಿಶೇಷವಾಗಿತ್ತು. ಇದೇ ಅಲ್ಲವಾ ಧರ್ಮಗಳನ್ನು ಪರಸ್ಪರ ಗೌರವಿಸುವ ಪರಿ ಎನಿಸಿತು.
ರಾಜ್ಯದಲ್ಲಿ ಕಳೆದ ಕೆಲ ತಿಂಗಳುಗಳಿಂದ ನಡೆಯುತ್ತಿದ್ದ ಧಾರ್ಮಿಕ ಪ್ರಕ್ಷುಬ್ದತೆಯನ್ನು ಕಂಡು ರೋಸಿ ಹೋಗಿದ್ದ ಮನಸ್ಸು ಹೂನಂತೆ ಹಗುರವಾಗಿದ್ದಲ್ಲದೆ, ತಿಳಿಯಾಯಿತು. ಬುಲ್ ಬುಲ್ಹಕ್ಕಿಯಂತೆ ಹಾರಾಡಿದ, ಹಬ್ಬದಂದು ಮನೆ ಮಕ್ಕಳು ಲಗುಬಗೆಯಿಂದ ಮನೆ ತುಂಬಾ ಓಡಾಡುತ್ತಿರುವಂತೆ ಮಸೀದಿ ಚಿತ್ರಣ ಕಂಡು ಬಂದಿತು.