ಸಾಮಾಜಿಕ ಬದ್ಧತೆಯಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು| ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್

  • ಹಿರಿಯ ಪತ್ರಕರ್ತ ಜಿ ಎನ್ ರಂಗನಾಥ ರಾವ್ ಅವರ 'ಆ ಪತ್ರಿಕೋದ್ಯಮ' ಕೃತಿ ಬಿಡುಗಡೆ
  • ಇಂದಿನ ಮಾಧ್ಯಮಗಳು ಜನಪರ ನಿಲುವಿನಿಂದ ದೂರ ಸರಿಯುವ ನಿಟ್ಟಿನಲ್ಲಿವೆ

ಆಳುವ ವರ್ಗದ ಓಲೈಕೆ ಮಾಡದೆ, ಕಾರ್ಪೊರೇಟ್ ಸಂಸ್ಥೆಗಳ ಬೆನ್ನು ಬೀಳದೆ, ಸತ್ಯಕ್ಕೆ ಅಪಚಾರವಾಗದ ರೀತಿಯಲ್ಲಿ ಸಾಮಾಜಿಕ ಬದ್ಧತೆಯಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು ಎಂದು ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮತ್ತು 'ಬಹುರೂಪಿ' ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ ಎನ್ ರಂಗನಾಥ ರಾವ್ ಅವರ 'ಆ ಪತ್ರಿಕೋದ್ಯಮ' ಕೃತಿ ಬಿಡುಗಡೆ ಮಾಡಲಾಯಿತು.

“ಜಿ ಎನ್ ರಂಗನಾಥರಾವ್ ಅವರ ಕೃತಿಯಲ್ಲಿ ಮಾಧ್ಯಮಗಳು ವೃತ್ತಿ ನಿಷ್ಠತೆಯನ್ನು ಮೆರೆಯಬೇಕಾದ ಅಗತ್ಯತೆಯನ್ನು ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಜಾಹೀರಾತಿನ ಒತ್ತಡಕ್ಕೆ ಇಂದು ಮಾಧ್ಯಮಗಳು ತನ್ನತನವನ್ನು ಕಳೆದುಕೊಳ್ಳುವ, ಜನಪರ ನಿಲುವಿನಿಂದ ದೂರ ಸರಿಯುವ ನಿಟ್ಟಿನಲ್ಲಿವೆ. ಅದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ” ಎಂದು ಸಿ ಎನ್ ರಾಮಚಂದ್ರನ್ ಅಭಿಪ್ರಾಯಪಟ್ಟರು.

Image

“ಜಿ ಎನ್ ರಂಗನಾಥರಾವ್ ಅವರು ತಮ್ಮ ಕಾಲದ ಪತ್ರಿಕೋದ್ಯಮ ಹೇಗೆ ಸತ್ಯನಿಷ್ಠುರತೆಯ ಪರವಾಗಿತ್ತು. ಜಾಹೀರಾತು ಆಮಿಷವನ್ನು ಮೆಟ್ಟಿ ನಿಂತಿತ್ತು ಎನ್ನುವುದನ್ನು ಸಾರಿದ್ದಾರೆ. ಈ ಕೃತಿ ಇಂದಿನ ಪತ್ರಕರ್ತರಿಗೂ, ಅದೇ ಸಮಯದಲ್ಲಿ ವಿದ್ಯಾರ್ಥಿಗಳಿಗೂ ಅಗತ್ಯ ಪಠ್ಯವಾಗಿದೆ” ಎಂದು ಅವರು ಹೇಳಿದರು.

ಸಾಹಿತಿ, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ಮಾಪಕಿ ಆರತಿ ಎಚ್ ಎನ್ ಮಾತನಾಡಿ, "ಆ ಪತ್ರಿಕೋದ್ಯಮ ಹಾಗೂ ಈ ಪತ್ರಿಕೋದ್ಯಮಗಳ ಮಧ್ಯೆ ದೊಡ್ಡ ಕಂದರವಿದೆ. ಇದಕ್ಕೆ ಮುಖ್ಯ ಕಾರಣ ಪತ್ರಿಕೋದ್ಯಮದ ಆದ್ಯತೆಗಳು ಬದಲಾಗಿರುವುದು. ತಂತ್ರಜ್ಞಾನ ಕಾಲಿಟ್ಟ ಮೇಲೆ ಸಮಾಜಮುಖಿ ನೋಟ ಇಲ್ಲವಾಗುತ್ತಿದೆ. ವ್ಯಷ್ಟಿಯ ಎದುರು ಸಮಷ್ಟಿಯ ಆದ್ಯತೆ ಇಲ್ಲವಾಗುತ್ತಿದೆ” ಎಂದರು.

ಸಾಹಿತಿ, 'ಬಹುರೂಪಿ'ಯ ಜಿ ಎನ್ ಮೋಹನ್ ಅವರು ಮಾತನಾಡಿ, ”ಜಾಗತೀಕರಣದ ನಂತರ ಮಾಧ್ಯಮ ಇನ್ನೊಂದು ಉದ್ಯಮವಾಗಿ ಬದಲಾಗಿದೆ. ಈ ಮೊದಲಿನ ಮಾಧ್ಯಮಕ್ಕೆ ಸಮಾಜವನ್ನು ಕಟ್ಟುವ ಕನಸುಗಳಿತ್ತು. ಆದರೆ, ಕೊಳ್ಳುಬಾಕ ಸಂಸ್ಕೃತಿಗೆ ಉತ್ತೇಜನ ನೀಡಿದ ಜಾಗತೀಕರಣ, ಮಾಧ್ಯಮವನ್ನು ವ್ಯಾಪಾರದ ಇನ್ನೊಂದು ಸರಕನ್ನಾಗಿ ಮಾಡಿದೆ” ಎಂದು ವಿಷಾದಿಸಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು| ವಾರ್ಡ್‌ಗೊಂದು ಗಣೇಶ ನಿರ್ಧಾರ ಅಂತಿಮವಾಗಿಲ್ಲ: ಬಿಬಿಎಂಪಿ ಸ್ಪಷ್ಟನೆ

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, ”ಡಿ.ವಿ.ಗುಂಡಪ್ಪ (ಡಿವಿಜಿ) ಅವರು ಪತ್ರಕರ್ತರಿಗಾಗಿ ಹುಟ್ಟು ಹಾಕಿದ ಸಂಘ ಇಂದು ರಾಜ್ಯದ ಉದ್ದಗಲಕ್ಕೂ ಅಗಾಧವಾಗಿ ಬೆಳೆದಿದೆ. ಪತ್ರಕರ್ತರ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಗಮನ ನೀಡುವುದಲ್ಲದೆ ಪತ್ರಕರ್ತರ ಸೃಜನಶೀಲ ಕೆಲಸಗಳಿಗೂ ಆದ್ಯತೆ ನೀಡುತ್ತದೆ. ಜಿ ಎನ್ ರಂಗನಾಥ ರಾವ್ ಅವರು ಈ ಸಂಘದ ಹಿರಿಯರಾಗಿದ್ದು, ಅವರ ಪತ್ರಿಕೋದ್ಯಮ ಪಯಣದ ಕಥನ ಇಂದಿನ ಪೀಳಿಗೆಗೆ ದಾರಿದೀಪ” ಎಂದು ಹೇಳಿದರು.

'ಬಹುರೂಪಿ'ಯ ಶ್ರೀಜಾ ವಿ ಎನ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಜಿ ಸಿ ಲೋಕೇಶ್, ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಬೆಂಗಳೂರು ನಗರ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್