ಸಚಿವಾಲಯ ಸಿಬ್ಬಂದಿ ಬಂದ್‌ ಯಶಸ್ವಿ: ವಿಧಾನಸೌಧ ಬಿಕೋ

Vidhana Soudha
  • ಕರ್ನಾಟಕ ವಿಧಾನಸಭೆ ಸಚಿವಾಲಯದ ನೌಕರರ ಸಂಘದಿಂದ ಬಂದ್‌ ಕರೆ
  • ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಕಚೇರಿಗಳಿಗೆ ಸಿಬ್ಬಂದಿ ಗೈರು

ಕರ್ನಾಟಕ ವಿಧಾನಸಭೆ ಸಚಿವಾಲಯದ ನೌಕರರ ಸಂಘವು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ(ಮೇ 27) ಕರೆ ನೀಡಿದ್ದ ಬಂದ್‌ ಯಶಸ್ವಿಯಾಗಿದೆ. 

ವಿಧಾನಸೌಧದ ಸಚಿವಾಲಯಗಳು ಪೂರ್ತಿ ಬಿಕೋ ಎನ್ನುತ್ತಿದ್ದವು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಸಚಿವಾಲಯದಲ್ಲಿ ಖಾಲಿ ಕೊಠಡಿಗಳು, ಮೇಜು, ಖರ್ಚಿ ಹಾಗೂ ಫೈಲ್‌ಗಳೇ ಕಂಡವು.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಹಾಗೂ ಸುತ್ತಮುತ್ತಲ ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ಬೆಳಿಗ್ಗೆಯಿಂದಲೇ ಸಿಬ್ಬಂದಿ ಗೈರಾಗಿದ್ದರು. ಎಲ್ಲಾ ಟೇಬಲ್‌ಗಳೂ ಖಾಲಿ ಹೊಡೆಯುತ್ತಿದ್ದವು. ಕಚೇರಿಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಬಿಟ್ಟರೆ ಬೇರೆ ಹೆಚ್ಚಿನ ಸಿಬ್ಬಂದಿ ಕಾಣಲಿಲ್ಲ.

ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಅವರನ್ನು ಈ ದಿನ.ಕಾಮ್‌ ಪ್ರತಿಭಟನೆ ವಿಚಾರವಾಗಿ ಮಾತನಾಡಿಸಿದಾಗ, “ರಾಜ್ಯ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ಸಲ ಮನವಿ ಮಾಡಿಕೊಂಡಿದ್ದೆವು. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೂ ತಂದಿದ್ದೆವು. ಯಾವುದಕ್ಕೂ ಸ್ಪಂದನೆ ಇಲ್ಲದೆ ಹೋಗಿದ್ದು, ಅನಿವಾರ್ಯವಾಗಿ ಒಂದು ದಿನದ ಬಂದ್‌ ಪ್ರತಿಭಟನೆಗೆ ಮುಂದಾಗಿದ್ದೇವೆ,” ಎಂದರು.

“ಸಚಿವಾಲಯದ ನೌಕರರೆಲ್ಲರೂ ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಿದ್ದಾರೆ. ನಮ್ಮ ಬಂದ್‌ ಯಶಸ್ವಿಯಾಗಿದ್ದು, ಮುಂದೆ ಮುಖ್ಯಮಂತ್ರಿಗಳು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕು. ನಂತರ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ,” ಎಂದು ವಿವರಿಸಿದರು.

Image
Vidhana Soudha

ಸಚಿವಾಲಯ ನೌಕರರ ಬೇಡಿಕೆಗಳು: 

  1. ಸಚಿವಾಲಯದ 542 ಕಿರಿಯ ಸಹಾಯಕ ಹುದ್ದೆ ಕಡಿತಗೊಳಿಸುವ ಪ್ರಸ್ತಾವನೆ ಕೈಬಿಡಬೇಕು
  2. ನಿವೃತ್ತ ನೌಕರರನ್ನು ಮರು ನೇಮಕ ಮಾಡುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು.
  3. ಜನಸ್ಪಂದನೆ ಇಲಾಖೆ ರದ್ದುಗೊಳಿಸಿರುವುದನ್ನು ಹಿಂಪಡೆಯುವುದು.
  4. ಖಾಲಿ ಇರುವ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು, ಎನ್‍ಕೇಡರ್ ಹುದ್ದೆಗಳನ್ನು ಸಚಿವಾಲಯ ಆಡಳಿತ ಸುಧಾರಣೆ ಇಲಾಖೆ ಮೂಲಕವೇ ತುಂಬಬೇಕು.
  5. ಸಚಿವಾಲಯದ ಆಪ್ತ ಶಾಖೆಗಳಲ್ಲಿ ಆಪ್ತ ಕಾರ್ಯದರ್ಶಿ/ ಆಪ್ತ ಸಹಾಯಕರ ಸೇವೆಗಳನ್ನು ಹೊರತುಪಡಿಸಿ ಹೊರಗುತ್ತಿಗೆ ನೌಕರರ ಸೇವೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
  6. ನೌಕರರ ಸೇವೆಗಳನ್ನು ಸಚಿವ ಆಪ್ತ ಶಾಖೆಗಳಲ್ಲಿ ಕಡ್ಡಾಯವಾಗಿ ಬಳಸಿಕೊಳ್ಳುವುದು, ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿಯೇ ಇಲಾಖೆಗಳನ್ನು ತರುವುದು.
  7. ಬಹುಮಹಡಿ ಕಟ್ಟಡದ ಆವರಣದ ರಸ್ತೆಯನ್ನು ಸಾರ್ವಜನಿಕ ರಸ್ತೆಯನ್ನಾಗಿ ಮಾಡಿರುವ ಕ್ರಮವನ್ನು ರದ್ದುಗೊಳಿಸಬೇಕು.

ಈ ಸುದ್ದಿ ಓದಿದ್ದೀರಾ? ವಿಧಾನಸಭೆ ಸಚಿವಾಲಯದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ; ನಿಯಮದಲ್ಲೇ ಗೊಂದಲ!

ಸುತ್ತೋಲೆಗೆ ಸೆಡ್ಡು ಹೊಡೆದ ನೌಕರರು

“ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ಕರೆ ನೀಡಿದ್ದ ಬಂದ್‌ ಗೆ ಯಾವುದೇ ಅನುಮತಿ ಇಲ್ಲ. ಇದು ಕಾನೂನುಬಾಹಿರವಾಗಿದ್ದು, ಈ ಕ್ರಮವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಅಧಿಕಾರಿಗಳು/ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗತಕ್ಕದ್ದು. ಒಂದು ವೇಳೆ ಸಚಿವಾಲಯದ ಅಧಿಕಾರಿಗಳು/ ಸಿಬ್ಬಂದಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೇ ಕಚೇರಿಗೆ ಗೈರಾದರೇ ಅಂಥವರನ್ನು ಲೆಕ್ಕಕ್ಕಿಲ್ಲದ ಅವಧಿ ಎಂದು ಪರಿಗಣಿಸಲಾಗುವುದು," ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್ ಸುತ್ತೋಲೆ ಹೊರಡಿಸಿದ್ದರು.

ಆದರೆ, ಸರ್ಕಾರ ಮುಖ್ಯಕಾರ್ಯದರ್ಶಿಯವರ ಸುತ್ತೋಲೆಗೆ ಸಚಿವಾಲಯದ ನೌಕರರು ಸೊಪ್ಪುಹಾಕದೆ ಬಂದ್ ಗೆ ಬೆಂಬಲ ಸೂಚಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್