ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ | ಎರಡು ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆ

  • ವಾರಾಂತ್ಯ-ರಜಾ ದಿನಗಳಲ್ಲಿ ಸಾರ್ವಜನಿಕರ ದಂಡು
  • ಟಿಕೆಟ್ ಮಾರಾಟದಿಂದ ₹1.2 ಕೋಟಿ ಹಣ ಸಂಗ್ರಹ

ಕೋವಿಡ್ ಕಾರಣ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಸ್ಥಗಿತಗೊಂಡಿತ್ತು. ಈ ವರ್ಷದಿಂದ ಮತ್ತೆ ಆರಂಭವಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಿನಿಮಾ ನಟರಾದ ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗಿದೆ.

ಆಗಸ್ಟ್ 5ರಂದು ಆರಂಭವಾಗಿರುವ ಪ್ರದರ್ಶನವು 15ರವರೆಗೆ ನಡೆಯಲಿದೆ. ಈಗಾಗಲೇ ಕಳೆದ ಏಳು ದಿನದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿದ್ದು, ಪ್ರವೇಶ ಟಿಕೆಟ್ ಮಾರಾಟದಿಂದ ಅಂದಾಜು ₹ 1.2 ಕೋಟಿ ಹಣ ಸಂಗ್ರಹವಾಗಿದೆ. ವಾರಾಂತ್ಯದಲ್ಲಿ ವೀಕ್ಷಣೆಗೆ ಬರುವವರ ಸಂಖ್ಯೆ ಹೆಚ್ಚಿದೆ.

ಈ ಕುರಿತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ್, ಈ ದಿನ.ಕಾಮ್ ಜತೆಗೆ ಮಾತನಾಡಿ, ”ಆಗಸ್ಟ್ 5ರಿಂದ ಲಾಲಾಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ವಾತಾವರಣದಲ್ಲಿ ಏರುಪೇರಿದ್ದರೂ ಪುಷ್ಪ ಪ್ರದರ್ಶನಕ್ಕೆ ಜನರು ಬರುವ ಸಂಖ್ಯೆ ಹೆಚ್ಚಿದೆ. ಆಗಸ್ಟ್ 5ರಿಂದ ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ” ಎಂದು ಹೇಳಿದರು.

“ಪ್ರವೇಶ ಟಿಕೆಟ್‌ನಿಂದ ಇಲ್ಲಿಯವರೆಗೂ ₹1.2 ಕೋಟಿ ಹಣ ಸಂಗ್ರಹವಾಗಿದೆ. ಈ ವರ್ಷ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್‌ ರಾಜ್‌ಕುಮಾರ್ ಮತ್ತು ಡಾ. ರಾಜ್‌ಕುಮಾರ್ ಅವರು ಕೇಂದ್ರಬಿಂದುವಾಗಿದ್ದಾರೆ. ಈ ಕಾರಣದಿಂದ ಜನ ಮಳೆ, ಗಾಳಿಯನ್ನೂ ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ” ಎಂದರು.

“ಹೂವಿನ ಅಲಂಕಾರದ ಮಧ್ಯೆ ಪುನೀತ್ ಅಣ್ಣನನ್ನು ನೋಡುವುದೆಂದರೆ ಖುಷಿ. ಅವರು ಈಗಲೂ ನಮ್ಮ ಜತೆಗೆ ಇದ್ದಾರೆ. ಪ್ರತಿವರ್ಷಕ್ಕಿಂತ ವಿಭಿನ್ನವಾಗಿ ಈ ವರ್ಷ ಫಲಪುಷ್ಪ ಪ್ರದರ್ಶನ ಆಯೋಜಿಸಿದ್ದಾರೆ” ಎಂದು ಪುನೀತ್ ಅಭಿಮಾನಿ ನಾಗರಾಜ ಈ ದಿನ.ಕಾಮ್‌ಗೆ ಹೇಳಿದರು.

ಈ ಸುದ್ದಿ ಓದಿದ್ದೀರಾ? ಅಮೃತ ಮಹೋತ್ಸವ| ಬೆಂಗಳೂರಿನ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕು: ತುಷಾರ್ ಗಿರಿನಾಥ್

“ಕೋವಿಡ್ ಕಾರಣದಿಂದ ಎರಡು ವರ್ಷ ಫಲಪುಷ್ಪ ಪ್ರದರ್ಶನವಿರಲಿಲ್ಲ. ಈ ವರ್ಷ ಡಾ.ರಾಜ್ ಮತ್ತು ಪುನೀತ್ ಅವರ ಪ್ರತಿಮೆಗಳನ್ನು ಇಟ್ಟಿದ್ದಾರೆ. ಶಕ್ತಿಧಾಮ, ರಾಜ್‌ಕುಮಾರ್ ಅವರ ಗಾಜನೂರು ಮನೆ ಇವುಗಳನ್ನು ಹೂವಿನಲ್ಲಿ ರೂಪಿಸಲಾಗಿದೆ. ಫಲಪುಷ್ಪ ಪ್ರದರ್ಶನ ನೋಡಲು ತುಂಬಾ ಸಂತಸವಾಗುತ್ತಿದೆ” ಎಂದು ಫಲಪುಷ್ಪ ವೀಕ್ಷಣೆಗೆ ಬಂದ ರೋಹನ್‌ ಎಂಬುವವರು ಈ ದಿನ.ಕಾಮ್‌ಗೆ ಹೇಳಿದರು.

50 ಬಗೆಯ ಹೂವುಗಳ ಪ್ರದರ್ಶನ 

ಈ ಬಾರಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಹೊರರಾಷ್ಟ್ರಗಳಿಂದ ಸುಮಾರು 45 ರಿಂದ 50 ಬಗೆಯ ನಾನಾ ಹೂವುಗಳನ್ನು ತರಿಸಲಾಗಿದೆ. ಹಾಲೆಂಡ್‌ನಿಂದ ‘ಡಚ್’ ಜಾತಿ ಹೂವು, ಪ್ರೋಟಿಯಸ್ ಟುಲಿಪ್ಸ್ ಹಾಗೂ ನಾಲ್ಕು ಬಣ್ಣದ ಹೈಡ್ರೇಂಜಿಯಾ ಹೂವುಗಳು ಎಲ್ಲರ ಗಮನ ಸೆಳೆಯುತ್ತಿವೆ.

ಸುಮಾರು ಒಂದು ಲಕ್ಷಕ್ಕೂ ಅಧಿಕ ಹೂಕುಂಡಗಳಿಂದ ಅಲಂಕಾರ ಮಾಡಲಾಗಿದೆ. ಊಟಿಯಿಂದ ಫಕ್ಷಿಯಾ, ಲಿಲ್ಲಿಸ್ ಹೂವುಗಳು ಹಾಗೂ ಇಂಪೆಟಿಎನ್ಸ್ ಹೂವುಗಳನ್ನು ತರಿಸಲಾಗಿದೆ. ವಿಶಿಷ್ಟ ರೀತಿಯ ಸೇವಂತಿಗೆ ಹೂವುಗಳು ಜನರನ್ನು ಆಕರ್ಷಿಸುತ್ತಿವೆ.

212ನೇ ಫಲಪುಷ್ಪ ಪ್ರದರ್ಶನ 

1922ರಲ್ಲಿ ಲಾಲ್‌ಬಾಗ್‌ನಲ್ಲಿ ಮೊದಲ ಫಲಪುಷ್ಪ ಪ್ರದರ್ಶನ ನಡೆದಿತ್ತು. ಅಂದಿನಿಂದ ಇಲ್ಲಿಯವರೆಗೆ 212ನೇ ಫಲಪುಷ್ಪ ಪ್ರದರ್ಶನಗಳು ನಡೆದಿವೆ.

ನಿಮಗೆ ಏನು ಅನ್ನಿಸ್ತು?
1 ವೋಟ್