
- ಧಾರವಾಡ ಆಸ್ಪತ್ರೆಗಳಲ್ಲಿ 2019-20ರಲ್ಲಿ 60, ತಾಯಂದಿರು ಮೃತ್ಯು
- ಮಾತೃಪೂರ್ಣ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ ಎಂದ ಆಪ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರ ಅಸಮರ್ಥ ಆಡಳಿತದಿಂದಾಗಿ ರಾಜ್ಯದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಸಾಯುತ್ತಿದ್ದಾರೆ. ಸಚಿವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕ ಆಗ್ರಹಿಸಿದೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, “ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಹಾಲಿ ಸಚಿವರಾದ ಹಾಲಪ್ಪ ಆಚಾರ್ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷವಾದರೂ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ತಾಯಂದಿರು, ಮಕ್ಕಳ ಮರಣ ಪ್ರಮಾಣ ಏರಿಕೆಯಾಗುತ್ತಿದೆ” ಎಂದು ಹೇಳಿದರು.
“ಮಾತೃಪೂರ್ಣ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಯೋಜನೆಯಡಿ ಪೂರೈಸಬೇಕಾದ ಆಹಾರವು ಭ್ರಷ್ಟರ ಪಾಲಾಗುತ್ತಿದೆ. ತೀವ್ರವಾದ ಅಪೌಷ್ಟಿಕತೆ ಹಾಗೂ ಕಲುಷಿತ ಆಹಾರ ಸೇವನೆಯಿಂದ ಬಾಣಂತಿಯರು ಹಾಗೂ ಮಕ್ಕಳು ಬಳಲುತ್ತಿದ್ದರೂ, ಸಚಿವ ಹಾಲಪ್ಪ ಆಚಾರ್ ಜಾಣಕುರುಡು ತೋರುತ್ತಿದ್ದಾರೆ" ಎಂದು ಆರೋಪಿಸಿದರು.
ಸಚಿವರಾದ ಹಾಲಪ್ಪ ಆಚಾರ್ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷವಾದರೂ ಮಹಿಳೆಯರು ಹಾಗೂ ಮಕ್ಕಳಿಗೆ ನೆರವಾಗುವಂತಹ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ತಾಯಂದಿರು, ಮಕ್ಕಳ ಮರಣ ಪ್ರಮಾಣ ಏರಿಕೆಯಾಗುತ್ತಿದೆ!
— AAP Bengaluru (@AAPBangalore) November 7, 2022
AAP's Women's wing leaders urged Minister for Women and Child Development, @HalappaAchar 's resignation pic.twitter.com/PIfk6sGOKi
"ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲಿ 2019-20ರಲ್ಲಿ 60, 2020-21ರಲ್ಲಿ 69, 2021-22ರಲ್ಲಿ 71 ಹಾಗೂ 2022-23ರಲ್ಲಿ ಸೆಪ್ಟೆಂಬರ್ವರೆಗೂ 41 ತಾಯಂದಿರು ಮೃತಪಟ್ಟಿದ್ದಾರೆ. ಇನ್ನು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಲ್ಲಿನ ಶಿಶು ಮರಣ ಪ್ರಮಾಣವನ್ನು ನೋಡುವುದಾದರೆ, 2019-20ರಲ್ಲಿ 504, 2020-21ರಲ್ಲಿ 454, 2021-22ರಲ್ಲಿ 327 ಹಾಗೂ 2022-23ರಲ್ಲಿ ಸೆಪ್ಟೆಂಬರ್ವರೆಗೂ 206 ಹಸುಗೂಸುಗಳು ಮೃತಪಟ್ಟಿವೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಹೊಸ ವಾರ್ಡ್ಗಳಿಗೆ ಅಗತ್ಯ ಸಿಬ್ಬಂದಿ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದ ಬಿಬಿಎಂಪಿ
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ವಕ್ತಾರೆ ಉಷಾ ಮೋಹನ್ ಮಾತನಾಡಿ, “ರಾಜ್ಯದ ಬಾಲಮಂದಿರಗಳಿಂದ ಕಳೆದ ಐದು ವರ್ಷಗಳಲ್ಲಿ 484 ಮಕ್ಕಳು ನಾಪತ್ತೆಯಾಗಿದ್ದು, ಈ ಪೈಕಿ 119 ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಬಾಲಮಂದಿರಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಮಕ್ಕಳು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಹೀಗೆ ತಪ್ಪಿಸಿಕೊಂಡ ಮಕ್ಕಳು ಮಾದಕ ವ್ಯಸನಿಗಳಾಗುವ ಹಾಗೂ ಸಮಾಜಘಾತುಕ ಶಕ್ತಿಗಳಾಗುವ ಸಾಧ್ಯತೆಯಿದ್ದರೂ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಆಮ್ ಆದ್ಮಿ ಪಾರ್ಟಿಯ ನಾಯಕಿಯರಾದ ಜ್ಯೋತಿ ಹಾಗೂ ಮರಿಯಾ ಉಪಸ್ಥಿತರಿದ್ದರು.