
- ವಿಶೇಷ ಚೇತನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಲಿಫ್ಟ್ ವ್ಯವಸ್ಥೆ
- ದೈಹಿಕವಾಗಿ ಸದೃಢವಾಗಿರುವವರು ಗಾಯಗಳಿಂದ ಬಳಲುತ್ತಿದ್ದರೆ ಮಾತ್ರ ಲಿಫ್ಟ್
ಬೆಂಗಳೂರಿನ 'ನಮ್ಮ ಮೆಟ್ರೋ' ನಿಲ್ದಾಣದಲ್ಲಿ ಲಿಫ್ಟ್ ಬಳಕೆಗೆ ಟೋಕನ್ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಮುಖ್ಯ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ ಚವ್ಹಾಣ್ ಹೇಳಿದರು.
"ನಮ್ಮ ಮೆಟ್ರೊ ನಿಲ್ದಾಣದಲ್ಲಿ ದಿನೇ ದಿನೇ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ವಿಶೇಷವಾಗಿ ಲಿಫ್ಟ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ವಿಶೇಷ ಚೇತನರು, ಹಿರಿಯ ನಾಗರಿಕರು ಹಾಗೂ ಗರ್ಭಿಣಿಯರಿಗೆ ಲಿಫ್ಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಲಿಫ್ಟ್ ಬಳಿ ಸೂಚನಾ ಫಲಕ ಹಾಕಿದರೂ ಕೂಡಾ ಹಲವು ಯುವಕ ಯುವತಿಯರು ಹಾಗೂ ಸದೃಢವಾಗಿರುವವರು ಲಿಫ್ಟ್ ಬಳಕೆ ಮಾಡುತ್ತಿರುವದರಿಂದ ಸಮಸ್ಯೆಯಾಗಿದೆ. ಹಾಗಾಗಿ ಇನ್ನು ಮುಂದೆ ಅಗತ್ಯ ಇರುವವರು ಭದ್ರತಾ ಸಿಬ್ಬಂದಿಗಳಿಂದ ಟೋಕನ್ ತೆಗೆದುಕೊಂಡು ಲಿಫ್ಟ್ ಬಳಸಿಕೊಳ್ಳಬಹುದಾಗಿದೆ" ಎಂದು ಬಿಎಂಆರ್ಸಿಎಲ್ ಮುಖ್ಯ ಸಂಪರ್ಕಾಧಿಕಾರಿ ಬಿ ಎಲ್ ಯಶವಂತ ಚವ್ಹಾಣ್ ಈದಿನ.ಕಾಮ್ಗೆ ತಿಳಿಸಿದರು.
“ಪ್ರಸ್ತುತವಾಗಿ ಈ ಪ್ರಕ್ರಿಯೆ ಬೆಂಗಳೂರಿನಲ್ಲಿರುವ ಐದು ಭೂಗತ ನಿಲ್ದಾಣಗಳಾದ ಕಬ್ಬನ್ ಪಾರ್ಕ್, ವಿಧಾನಸೌಧ, ಸರ್ ಎಂ ವಿಶ್ವೇಶ್ವರಯ್ಯ, ಕೆಎಸ್ಆರ್ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಮೆಟ್ರೋ ನಿಲ್ದಾಣಗಳಿಗೂ ಈ ಪ್ರಕ್ರಿಯೆ ಜಾರಿ ಮಾಡಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? 'ನಮ್ಮ ಮೆಟ್ರೊ' ನಷ್ಟ ಭರಿಸಲು ರಾಜ್ಯ ಸರ್ಕಾರದಿಂದ ₹124 ಕೋಟಿ ಅನುದಾನ
"ದೈಹಿಕವಾಗಿ ಸದೃಢವಾಗಿರುವವರು ಗಾಯಗಳಿಂದ ಬಳಲುತ್ತಿದ್ದರೆ ಅಥವಾ ನಡೆಯಲಾಗದ ಸ್ಥಿತಿಯಲ್ಲಿದ್ದರೆ ಮಾತ್ರ ಅಂತಹವರಿಗೆ ಲಿಫ್ಟ್ ಬಳಕೆಗೆ ಅನುಮತಿ ನೀಡಲಾಗುವುದು" ಎಂದು ಹೇಳಿದರು.
"ಲಿಫ್ಟ್ನೊಳಗೆ ಪ್ರವೇಶ ಪಡೆಯಲು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್ಎಫ್) ಸಿಬ್ಬಂದಿಯಿಂದ ಟೋಕನ್ ಪಡೆದು ಬಳಕೆ ಮಾಡಿದ ನಂತರ ಅದೇ ಸಿಬ್ಬಂದಿಗೆ ಟೋಕನ್ ಹಸ್ತಾಂತರಿಸಬೇಕು" ಎಂದರು.