
- ದಂಡ ಕಟ್ಟದ ಸವಾರರ ವಾಹನ ದಾಖಲೆಗಳನ್ನು ನೀಡದೇ ಸತಾಯಿಸುತ್ತಿರುವ ಇಲಾಖೆ
- ಸಿಸಿಟಿವಿ ಕ್ಯಾಮೆರಾಗಳನ್ನು ಸಂಚಾರ ನಿರ್ವಹಣೆಗೆ ಬದಲು ದಂಡ ವಸೂಲಿಗೆ ಬಳಕೆ
ಸಣ್ಣಪುಟ್ಟ ಸಂಚಾರ ನಿಯಮ ಉಲ್ಲಂಘನೆಗೂ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತಿದ್ದು, ಇದನ್ನು ಕಟ್ಟಲು ಸಾಧ್ಯವಾಗದ ಬಡ-ಮಧ್ಯಮ ವರ್ಗದ ವಾಹನ ಸವಾರರಿಗೆ ಅಗತ್ಯ ದಾಖಲೆಗಳನ್ನು ನೀಡದಿರಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿರುವುದು ಅತ್ಯಂತ ಅಮಾನವೀಯ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹೇಳಿದರು.
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜಗದೀಶ್ ವಿ ಸದಂ, “ದಂಡ ಕಟ್ಟಲು ಸಾಧ್ಯವಾಗದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ವಿಮಾ ಪಾಲಿಸಿ ನವೀಕರಣ, ರಸ್ತೆ ತೆರಿಗೆ ಪಾವತಿ ರಸೀದಿ ಹಾಗೂ ವಾಹನ ಕ್ಷಮತೆ ಪ್ರಮಾಣ ಪತ್ರ (ಫಿಟ್ನೆಸ್ ಸರ್ಟಿಫಿಕೇಟ್) ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ" ಎಂದರು.
"ವಾಹನ ಸವಾರರಿಗೆ ಗುಂಡಿಗಳಿಲ್ಲದ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಲು ಸಾಧ್ಯವಾಗದ ರಾಜ್ಯ ಸರ್ಕಾರವು ದಂಡ ವಸೂಲಿಗೆ ಮಾತ್ರ ಕಠಿಣ ನಿಲುವು ತೆಗೆದುಕೊಳ್ಳುವುದು ಸರಿಯಲ್ಲ. ಬೆಂಗಳೂರಿನ ಬಹುತೇಕ ವಾಹನ ಸವಾರರ ಮೇಲೆ ಕನಿಷ್ಠ ₹2,000 ದಿಂದ ಗರಿಷ್ಠ ₹40,000 ದವರೆಗೆ ದಂಡವಿದೆ. ಇದರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದವರಾಗಿದ್ದು, ಸರ್ಕಾರದ ನೂತನ ನಿರ್ಧಾರದಿಂದ ಇವರಿಗೆ ತೀವ್ರ ತೊಂದರೆಯಾಗಲಿದೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯು ದೊಡ್ಡ ಸಮಸ್ಯೆಯಾಗಿದ್ದು, ಇದರಿಂದ ವಾಹನ ಸವಾರರು ನಿತ್ಯ ಹೈರಾಣಾಗುತ್ತಿದ್ದಾರೆ. ಅವರ ಅಮೂಲ್ಯ ಸಮಯವು ರಸ್ತೆಯಲ್ಲಿ ವ್ಯರ್ಥವಾಗುತ್ತಿದೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಬಳಸಿಕೊಳ್ಳುವ ಬದಲು ಕೇವಲ ದಂಡ ವಸೂಲಿ ಮಾಡಲು ಬಳಸಿಕೊಳ್ಳಲಾಗುತ್ತಿದೆ" ಎಂದು ಆರೋಪಿಸಿದರು.
"ವಾಹನ ಸವಾರರನ್ನು ಲೂಟಿ ಮಾಡುವುದೇ ಪೊಲೀಸ್ ಇಲಾಖೆಯ ಆದ್ಯತೆಯ ವಿಷಯವಾಗಿದೆ. ಬೆಂಗಳೂರಿನ ರಸ್ತೆಗಳಿಗೆಂದು ಬಿಡುಗಡೆಯಾದ ₹26,000 ಕೋಟಿ ಹಾಗೂ ಬಿಡಬ್ಲ್ಯೂಎಸ್ಎಸ್ಬಿಯಿಂದ ಬಿಡುಗಡೆಯಾದ ₹10,000 ಕೋಟಿ ಬಹುಪಾಲು ಹಣವು ಜನಪ್ರತಿನಿಧಿಗಳ ಜೇಬು ಸೇರಿದೆ. ಪರಿಣಾಮವಾಗಿ, ವಾಹನ ಸವಾರರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ" ಎಂದರು.
ಈ ಸುದ್ದಿ ಓದಿದ್ದೀರಾ? ಸಂಚಾರ ದಟ್ಟಣೆ ವ್ಯಂಗ್ಯವಾಡಿದ ಟಾಲಿವುಡ್ ನಟ| ಮತ್ತೊಮ್ಮೆ ಹಾಸ್ಯದ ವಸ್ತುವಾದ ಬೆಂಗಳೂರು ಮೂಲಸೌಕರ್ಯ
"ಗಾಯದ ಮೇಲೆ ಬರೆ ಎಂಬಂತೆ ಸರ್ಕಾರ ಇನ್ನಷ್ಟು ನಿಯಮಗಳನ್ನು ತಂದು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ದಂಡ ಪಾವತಿಸದವರಿಗೆ ಅಗತ್ಯ ದಾಖಲೆಗಳನ್ನು ನೀಡುವುದಿಲ್ಲವೆಂಬ ನಿರ್ಧಾರವನ್ನು ಸಿಎಂ ಬಸವರಾಜ ಬೊಮ್ಮಾಯಿಯವರು ಶೀಘ್ರವೇ ಹಿಂಪಡೆಯಬೇಕು. ಇಲ್ಲದಿದ್ದರೆ ಆಮ್ ಆದ್ಮಿ ಪಾರ್ಟಿಯು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಿದೆ. ವಾಹನ ಸವಾರರ ಜೊತೆಗೂಡಿ ಪ್ರತಿಭಟನೆ ನಡೆಸಲು ನಾವು ನಿರ್ಧರಿಸಿದ್ದೇವೆ” ಎಂದು ಜಗದೀಶ್ ವಿ ಸದಂ ಹೇಳಿದರು.