ಒಂದು ನಿಮಿಷದ ಓದು| ವಿಧಾನಸೌಧದ ದೀಪಾಲಂಕಾರ ಟೀಕಿಸಿದ ಸಿಬಿಐ ಮಾಜಿ ನಿರ್ದೇಶಕ ನಾಗೇಶ್ವರ ರಾವ್

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ, ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿದೆ. 

ಪ್ರತಿ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿಯೂ ವಿಧಾನಸೌಧಕ್ಕೆ ವಿಶೇಷ ದೀಪಾಲಂಕಾರ ಮಾಡುವುದು ವಾಡಿಕೆ. ಈ ಬಾರಿ ಸುವರ್ಣ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇನ್ನಷ್ಟು ವಿಶೇಷ ಅಲಂಕಾರ ಮಾಡಲಾಗಿದೆ. ಆದರೆ, ಈ ಬಾರಿಯ ವಿಶೇಷ ದೀಪಾಲಂಕಾರ ಜನಮೆಚ್ಚುಗೆ ಗಳಿಸುವ ಬದಲಾಗಿ ಟೀಕೆ, ಅಪಹಾಸ್ಯಕ್ಕೆ ಈಡಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರು ಮತ್ತು ಸಾರ್ವಜನಿಕರು ಈ ಬಾರಿಯ ದೀಪಾಲಂಕಾರದ ಕುರಿತು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

"ವಿಧಾನಸೌಧಕ್ಕೆ ಮಾಡಿರುವ ದೀಪಾಲಂಕಾರ ಅಸಹ್ಯವಾಗಿ ಕಾಣಿಸುತ್ತಿದೆ" ಎಂದು ಸಿಬಿಐನ ಮಾಜಿ ನಿರ್ದೇಶಕರಾದ ಎಂ ನಾಗೇಶ್ವರ ರಾವ್ ಅವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಬೆಂಬಲಿಸಿ ಹಲವರು ಪ್ರತಿಕ್ರಿಯಿಸಿದ್ದಾರೆ. "ವಿಧಾನಸೌಧದ ದೀಪಾಲಂಕಾರ ಮುಂಬೈನ ಸ್ಲಮ್ ಏರಿಯಾದ ಡಿಸ್ಕೋ ಕ್ಲಬ್ ರೀತಿ ಕಾಣಿಸುತ್ತಿದೆ" ಎಂದು ಒಬ್ಬರು ಹೇಳಿದ್ದಾರೆ. ಹೈದರಾಬಾದ್‌ನ ಚಾರ್‌ ಮಿನಾರ್ ಅಲಂಕಾರದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ವಿಧಾನಸೌಧದ ದೀಪಾಲಂಕಾರಕ್ಕೆ ತಪ್ಪಾದ ಬಣ್ಣಗಳ ಬಳಕೆ ಮಾಡಿದ್ದಾರೆ" ಎಂದು ಕೆಲವು ಜನರು ಪ್ರತಿಕ್ರಿಯಿಸಿದ್ದಾರೆ.

ಪ್ರತಿ ಬಾರಿ ರಾಜ್ಯದ ವಿಧಾನಸೌಧದ ದೀಪಾಲಂಕಾರ ಜನಾಕರ್ಷಣೆಯ ವಿಷಯವಾಗಿರುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಆ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿತ್ತು. ಆದರೆ, ಈ ಬಾರಿ ಸುವರ್ಣ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇನ್ನಷ್ಟು ಜನಮೆಚ್ಚುಗೆಗೆ ಪಾತ್ರವಾಗಬೇಕಿದ್ದ ವಿಧಾನಸೌಧದ ದೀಪಾಲಂಕಾರ ಟೀಕೆ ಮತ್ತು ವಿಡಂಬನೆಯ ವಸ್ತುವಾಗಿದೆ!

ನಿಮಗೆ ಏನು ಅನ್ನಿಸ್ತು?
0 ವೋಟ್