ಒಂದು ನಿಮಿಷದ ಓದು | ಪಾದಯಾತ್ರೆ ಸಾಗಿದ ದಾರಿಯುದ್ದಕ್ಕೂ ಕಸದ ರಾಶಿ

ಬೆಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯ ಬಳಿಕ, ನಗರದ ಕೆ ಆರ್‌ ಸರ್ಕಲ್‌ನಲ್ಲಿ ರಾಶಿ ರಾಶಿ ಕಸ ಕಂಡುಬಂದಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಕಾಂಗ್ರೆಸ್‌ 'ಸ್ವಾತಂತ್ರ್ಯ ನಡಿಗೆ' ಪಾದಯಾತ್ರೆ ಹಮ್ಮಿಕೊಂಡಿತ್ತು. ನಡಿಗೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಅವರೆಲ್ಲರಿಗೂ ದಾರಿಯುದ್ದಕ್ಕೂ ಕಲ್ಲಂಗಡಿ ಹಣ್ಣನ್ನು ಹಂಚಲಾಗಿತ್ತು.

ಕಾರ್ಯತರ್ಕರು ಕಲ್ಲಂಗಡಿ ಸಿಪ್ಪೆಯನ್ನು ಕೆ ಆರ್‌ ಸರ್ಕಲ್‌ ಸೇರಿದಂತೆ ಪಾದಯಾತ್ರೆ ನಡೆದ ಕೆಲವು ಭಾಗಗಳಲ್ಲಿ ಎಸೆದು ಹೋಗಿದ್ದರು. ಪಾದಯಾತ್ರೆ ಸೋಮವಾರ ನಡೆದಿದ್ದರೂ, ಮಂಗಳವಾರ ಬೆಳಗ್ಗೆಯೂ ಕಲ್ಲಂಗಡಿ ಸಿಪ್ಪೆಗಳ ರಾಶಿ ಹಾಗೆಯೇ ಉಳಿದಿದೆ. ರಸ್ತೆಯಲ್ಲಿ ಸಂಚರಿಸುವವರಿಗೆ ಭಾರೀ ಕಿರಿಕಿರಿ ಉಂಟುಮಾಡಿದೆ.

ಕಸದ ರಾಶಿಯ ಚಿತ್ರವನ್ನು ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಆಶಿಕ್ ಮುಲ್ಕಿ ಎಂಬವರು ಬಿಬಿಎಂಪಿ ಆಯುಕ್ತರಿಗೆ ಟ್ಯಾಗ್ ಮಾಡಿ, 'ಬೆಂಗಳೂರಿಗರಿಗೆ ಈ ಥರ ಗುಡ್ ಮಾರ್ನಿಂಗ್ ಹೇಳೋದೆ? ಎಂದು ಕೇಳಿದ್ದಾರೆ.

"ಕಸದ ರಾಶಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತೆರವುಗೊಳಿಸಿಲ್ಲ. ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಿದೆ. ಅದಕ್ಕಾಗಿಯೇ ಕಸದ ರಾಶಿಯನ್ನು ಹಾಗೆಯೇ ಉಳಿಸಿದ್ದಾರೆ. ಅಧಿಕಾರಿಗಳೂ ಸ್ವಚ್ಛತೆಗೆ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರವೆಂದು" ನೆಟ್ಟಿಗರು ಟ್ವೀಟ್‌ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್