
ಜ್ಞಾನಭಾರತಿ ಮೆಟ್ರೋ ನಿಲ್ದಾಣಕ್ಕೆ 'ಡಾ.ಎಚ್. ನರಸಿಂಹಯ್ಯ ಜ್ಞಾನಭಾರತಿ ಮೆಟ್ರೋ ನಿಲ್ದಾಣ' ಎಂದು ಮರು ನಾಮಕರಣ ಮಾಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್ಸಿಎಲ್)ಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯ ಒತ್ತಾಯಿಸಿದೆ.
ಬೆಂಗಳೂರು ವಿವಿ ಕ್ಯಾಂಪಸ್ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಎಚ್. ನರಸಿಂಹಯ್ಯ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಮರುನಾಮಕರಣ ಮಾಡಬೇಕು ಎಂದು ವಿಶ್ವವಿದ್ಯಾಲಯವು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿತ್ತು. ಆ ಮನವಿ ಮೇರೆಗೆ ಜ್ಞಾನಭಾರತಿ ಮೆಟ್ರೋ ನಿಲ್ದಾಣಕ್ಕೆ 'ಡಾ.ಎಚ್. ನರಸಿಂಹಯ್ಯ ಜ್ಞಾನಭಾರತಿ ಮೆಟ್ರೋ ನಿಲ್ದಾಣ' ಸಾಧ್ಯತೆ ಇದೆ.
ಈಗಾಗಲೇ, ಬಿಎಂಆರ್ಸಿಎಲ್ ಸಾಕಷ್ಟು ಮೆಟ್ರೋ ನಿಲ್ದಾಣಗಳ ಹೆಸರನ್ನು ಬದಲಾಯಿಸಿದೆ. ಅದೇ ರೀತಿಯಲ್ಲಿ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸಲು ಬೆಂಗಳೂರು ವಿವಿ ಮನವಿ ಮಾಡಿಕೊಂಡಿದೆ. ಇತ್ತೀಚೆಗೆ ನಡೆದ ಬೆಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲಿ ಎಚ್ಎನ್ ಅವರ ಹೆಸರಿಡುವ ಕುರಿತು ಮನವಿ ಸಲ್ಲಿಸಲು ತೀರ್ಮಾನಿಸಲಾಗಿತ್ತು.