ಒಂದು ನಿಮಿಷದ ಓದು | ಬಿಬಿಎಂಪಿ: ಮಂಕಿ ಪಾಕ್ಸ್‌ ಸೋಂಕು ನಿಯಂತ್ರಣಕ್ಕಾಗಿ ಕಟ್ಟೆಚ್ಚರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರಿನಲ್ಲಿ ಮಂಕಿ ಪಾಕ್ಸ್‌ ಸೋಂಕು ನಿಯಂತ್ರಣಕ್ಕಾಗಿ ಕಟ್ಟೆಚ್ಚರ ವಹಿಸಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕೇರಳದಲ್ಲಿ ಮಂಕಿ ಪಾಕ್ಸ್‌ ಸೋಂಕು ಪತ್ತೆಯಾಗಿದೆ. ಹಾಗಾಗಿ ಬಿಬಿಎಂಪಿ ನಗರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಸೋಂಕು ತಡೆಗೆ ಸಂಬಂಧಿಸಿದಂತೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಕೇರಳ ಹಾಗೂ ಹೊರರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ ಇಡಲಾಗಿದೆ” ಎಂದರು.

“ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಹಾಗೂ ಬಿಬಿಎಂಪಿ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರಿಗೆ ತಪಾಸಣೆ ನಡೆಸಲಾಗುವುದು. ತಪಾಸಣೆ ವೇಳೆ ಸೋಂಕಿತರು ಕಂಡುಬಂದರೆ ಅವರನ್ನು ಐಸೋಲೇಷನ್ ಮಾಡಲಾಗುವುದು" ಎಂದು ತಿಳಿಸಿದರು.

"ಬೆಂಗಳೂರಿನಲ್ಲಿ ಇಲ್ಲಿಯವರೆಗೂ ಯಾವುದೇ ಮಂಕಿ ಪಾಕ್ಸ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಸಾರ್ವಜನಿಕರು ಭಯಪಡುವಂತಿಲ್ಲ. ಆದರೆ, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರೋಗ ನಿಯಂತ್ರಣಕ್ಕೆ ಸಹಕರಿಸಿ" ಎಂದು ಅವರು ಮನವಿ ಮಾಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್