ಲಾಕ್‌ಡೌನ್‌ ಆಘಾತದ ಬಳಿಕ ಆರ್ಥಿಕ ಚೇತರಿಕೆ ಹಳಿಗೆ ಬಂದ 'ನಮ್ಮ ಮೆಟ್ರೊ'

  • ಕಳೆದ ಜನವರಿ 3ರಂದು ಒಂದೇ ದಿನದಲ್ಲಿ ₹1.03 ಕೋಟಿ ಆದಾಯ
  • ಮೇ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 4 ಲಕ್ಷ ಮಂದಿ ಪ್ರಯಾಣಿಸುತ್ತಾರೆ

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾದ ನಂತರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ʼನಮ್ಮ ಮೆಟ್ರೊʼ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದ ನಂತರ ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲೂ ದಿನೇದಿನೆ ಏರಿಕೆ ಕಾಣುತ್ತಿದೆ. ಇದರಿಂದ ಬೆಂಗಳೂರು ಮೆಟ್ರೊ ರೈಲು ನಿಗಮದ(ಬಿಎಂಆರ್‌ಸಿಎಲ್) ವರಮಾನವೂ ಹೆಚ್ಚಳವಾಗುತ್ತಿದೆ.

Eedina App

2020ರಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ

2020ರ ಜನವರಿ ಹಾಗೂ ಫೆಬ್ರುವರಿಯಲ್ಲಿ ಕ್ರಮವಾಗಿ 1.29 ಕೋಟಿ ಮಂದಿ ನೇರಳೆ ಮಾರ್ಗದಲ್ಲಿ ಹಾಗೂ 1.18 ಕೋಟಿ ಮಂದಿ ಹಸಿರು ಮಾರ್ಗದಲ್ಲಿ ಸಂಚರಿಸಿದ್ದರು. ಮಾರ್ಚ್‌ ವೇಳೆಗೆ 66.52ಲಕ್ಷ ಮಂದಿ ಸಂಚರಿಸಿದ್ದರು. ಡಿಸೆಂಬರ್ ವೇಳೆಗೆ ಒಟ್ಟು 28.87 ಲಕ್ಷ ಮಂದಿ ಪ್ರಯಾಣಿಸಿದ್ದರು. ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿತ್ತು.

AV Eye Hospital ad

ಒಟ್ಟಾರೆಯಾಗಿ 2020ನೇ ವರ್ಷದಲ್ಲಿ ನೇರಳೆ ಮಾರ್ಗದಲ್ಲಿ 2.34 ಕೋಟಿ ಹಾಗೂ ಹಸಿರು ಮಾರ್ಗದಲ್ಲಿ 2.26 ಕೋಟಿ ಮಂದಿ ಸಂಚರಿಸಿದ್ದಾರೆ. 2020ನೇ ವರ್ಷದಲ್ಲಿ ಒಟ್ಟು 105.68 ಕೋಟಿ ಬಿಎಂಆರ್‌ಸಿಎಲ್‌ಗೆ ವರಮಾನವಾಗಿತ್ತು.

2022ರಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ

2022ನೇ ವರ್ಷದ ಜನವರಿ ಹಾಗೂ ಫೆಬ್ರುವರಿಯಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ 85 ಲಕ್ಷಕ್ಕಿಂತ ಕಡಿಮೆ ಇತ್ತು. ಸಂಪೂರ್ಣವಾಗಿ ಕೋವಿಡ್ ಪ್ರಕರಣಗಳಲ್ಲಿ ಇಳಿಮುಖ ಕಂಡ ನಂತರ ಮಾರ್ಚ್ ವೇಳೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಮಾರ್ಚ್ ತಿಂಗಳಲ್ಲಿ ಒಟ್ಟು 1.09 ಕೋಟಿ ಮಂದಿ ಪ್ರಯಾಣ ಮಾಡಿದ್ದಾರೆ. ಇದರಿಂದ ₹25.67 ಕೋಟಿ ಬಿಎಂಆರ್‌ಸಿಎಲ್‌ಗೆ ಆದಾಯವಾಗಿತ್ತು.

2022ರ ಜನವರಿಯಿಂದ ಎಪ್ರಿಲ್‌ವರೆಗೆ ನೇರಳೆ ಮಾರ್ಗದಲ್ಲಿ 1.76 ಕೋಟಿ ಮಂದಿ ಹಾಗೂ ಹಸಿರು ಮಾರ್ಗದಲ್ಲಿ 1.90 ಕೋಟಿ ಮಂದಿ ಪ್ರಯಾಣಿಸಿದ್ದಾರೆ. ಒಟ್ಟು ₹87.86 ಕೋಟಿ ಆದಾಯವಾಗಿದೆ. ಈ ವರ್ಷದ ಮೇ ತಿಂಗಳಿನಲ್ಲಿ ಪ್ರತಿನಿತ್ಯ ಸರಾಸರಿ 4,03,320 ಮಂದಿ ಪ್ರಯಾಣಿಸುತ್ತಾರೆ.

ಈ ವರ್ಷದ ಜನವರಿ 3ರಂದು ಒಂದೇ ದಿನದಲ್ಲಿ 1.03 ಕೋಟಿ ಹೆಚ್ಚಿನ ಆದಾಯ ಸಂಗ್ರಹವಾಗಿದೆ. ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಿನಲ್ಲಿ ಒಟ್ಟು 76,540 ಸ್ಮಾರ್ಟ್‌ ಕಾರ್ಡ್‌ಗಳ ವಿತರಣೆಯಾಗಿದೆ. ಮಾರ್ಚ್‌ನಲ್ಲಿ 30,20,463 ಟೋಕನ್‌ಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ.

ಈ ವಿಚಾರವಾಗಿ ಈ ದಿನ.ಕಾಮ್ನೊಂದಿಗೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾತನಾಡಿ, ”ಈ ವರ್ಷದ ಪ್ರಾರಂಭದಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ನಂತರ ಕೋವಿಡ್ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಇಳಿಮುಖವಾದ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಪ್ರಾಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರಸ್ತುತ ಮೇ ತಿಂಗಳಿನಲ್ಲಿ ದಿನಕ್ಕೆ 4.5 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಿದ್ದಾರೆ. ಇದರಿಂದ ವರಮಾನ ಜಾಸ್ತಿಯಾಗಿದೆ” ಎಂದು ಹೇಳಿದರು.

"ಕೋವಿಡ್‌ಗೂ ಮುಂಚೆ ದಿನವೊಂದಕ್ಕೆ 6 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಸದ್ಯ 4.5 ಲಕ್ಷ ಮಂದಿಯಷ್ಟೇ ಪ್ರಯಾಣಿಸುತ್ತಿದ್ದಾರೆ. ಪ್ರಸ್ತುತ 4 ನಿಮಿಷಕ್ಕೆ ಒಂದು ಮೆಟ್ರೊ ರೈಲು ಇದೆ. ಇದೇ ಮುಂದುವರಿಯುತ್ತದೆ. ಈಗ ಇರುವ ಮಾರ್ಗದಲ್ಲಿ ಮೆಟ್ರೊ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸುವುದಿಲ್ಲ. ಹೊಸ ಮಾರ್ಗದಲ್ಲಿ ರೈಲು ಪ್ರಾರಂಭವಾದ ಮೇಲೆ ಅಲ್ಲಿ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ" ಎಂದು ಮಾಹಿತಿ ನೀಡಿದರು.

ಈ ಸುದ್ದಿ ಓದಿದ್ದೀರಾ? ಶನಿವಾರ ರಾತ್ರಿ ಮೆಟ್ರೊ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ

“ಕೋವಿಡ್ ಪ್ರಕರಣಗಳ ಸಂಖ್ಯೆ ಸಂಪೂರ್ಣವಾಗಿ ಇಳಿಮುಖ ಕಂಡ ಮೇಲೆ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಕೋವಿಡ್ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಮತ್ತು ಇನ್ನುಳಿದ ಕಂಪನಿಗಳ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಲಾಕ್‌ಡೌನ್‌ ಸಂಪೂರ್ಣ ತೆರುವುಗೊಳಿಸಿದ ಮೇಲೆ ಬಹುತೇಕ ನೌಕರರು ಕಚೇರಿಗೆ ತೆರಳಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ" ಎಂದರು.

“ಕೋವಿಡ್ ಸಮಯದಲ್ಲಿ ಜಾಹೀರಾತು ಮೂಲಕ ಆದಾಯ ಸಂಗ್ರಹಿಸುವ ಉದ್ದೇಶದಿಂದ ಟೆಂಡರ್ ಕರೆಯಲಾಗಿತ್ತು. ಆದರೆ ಯಾವ ಕಂಪನಿಯೂ ಕೂಡ ಬಂದಿರಲಿಲ್ಲ. ಈಗ ಮತ್ತೆ ಮರು ಟೆಂಡರ್ ಆಹ್ವಾನಿಸಲು ನಿರ್ಧರಿಸಲಾಗಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೆಟ್ರೋ ರೈಲು ಸೇವೆ ವಿಸ್ತರಿಸುವ ಆಲೋಚನೆ ಇದೆ" ಎಂದೂ ಅವರು ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app